ಮಂಡ್ಯ : ಕಳೆದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಆದ ಸೋಲನ್ನು ನಾನೆಂದೂ ಒಪ್ಪಲು ತಯಾರಿಲ್ಲ. ಜಿಲ್ಲೆಯ ಜನ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಿದ್ರು. ಕೆಲವರ ಕುತಂತ್ರದ ರಾಜಕಾರಣದಿಂದ ಸೋಲಾಗಿದೆಯೇ ಹೊರತು, ಜಿಲ್ಲೆಯ ಜನ ಸೋಲಿಸಿಲ್ಲ ಎಂದು ಕಳೆದ ಹಾಸನದಲ್ಲಿ ನಡೆದ ಸಭೆಯಲ್ಲಿಯೂ ಹೇಳಿದ್ದೆ, ಈಗಲೂ ಆ ಮಾತನ್ನ ಪುನರುಚ್ಛರಿಸುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯನ್ನ ಈ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಳೆದುಕೊಂಡರೆ ನಾವು ಇದ್ದೂ ಸತ್ತಂತೆ ಎಂದರು. ನಿಮ್ಮ ಮುಂದೆ ನಾನು ಎಲ್ಲಾ ವಿಷಯವನ್ನು ಪ್ರಸ್ತಾಪಿಸುತ್ತೇನೆ. ನಿಮಗೆ ನಿರಾಸೆ ಮಾಡಲು ನಾನು ತಯಾರಾಗಿಲ್ಲ. ಹೀಗಾಗಿ ನಮ್ಮ ನಾಯಕರಗಳ ಮಾತನ್ನ ಸಮಾಧಾನದಿಂದ ಕೇಳಿ. ಕೊನೆಗೂ ನನಗೆ ಮಾತನಾಡಲು ಅವಕಾಶ ಕೊಡಿ. ಸಭೆ ಸುಗಮವಾಗಿ ಆಗಲಿ. ಇವತ್ತು ಜನತಾದಳ ಮುಗಿಸಬೇಕು ಅಂದಿದ್ದಾರೆ. ಅದಕ್ಕೆ ನಿಮ್ಮಿಂದಲೇ ಉತ್ತರ ಬರಬೇಕು ಎಂದಿದ್ದಾರೆ. ನಮ್ಮ ನಾಯಕರಿಗೆ ಮಾತನಾಡಲು ಅವಕಾಶ ಕೊಡಿ. ಕೊನೆಯದಾಗಿ ನಾನು ಮಾತನಾಡುತ್ತೇನೆ ಎಂದರು.
ನನ್ನ ಬಿಡದಿ ತೋಟ ಮಾರಿ ಚುನಾವಣೆ ಮಾಡಲು ಹೋಗಿದ್ದೆ. ಹಲವು ಬಡ್ಡಿ ವ್ಯವಹಾರ ಮಾಡೋರಿಂದ ಹಣ ತಂದು ಚುನಾವಣೆ ಮಾಡಿದ್ದೇವೆ. ನಾವು ಬೇರೆ ಹಾದಿಯಿಂದ ಹಣ ಸಂಪಾದಿಸಿಲ್ಲ. ಇವತ್ತು ಜಾತ್ಯತೀತ ಪದ ತೆಗೆದುಬಿಡಿ ಅಂತಾರೆ. ನಮಗೋಸ್ಕರ ಇನ್ನೊಬ್ಬರಿಗೆ ನಾನು ತೊಂದ್ರೆ ಕೊಟ್ಟಿಲ್ಲ. ಮತ್ತೊಬ್ಬರ ಬಾಳು ಹಾಳು ಮಾಡಿಲ್ಲ ನಾನು. 2018ರಲ್ಲಿ ನಡೆದ ಘಟನೆಯೇ ದೇವೇಗೌಡರ ಈ ನಿರ್ಧಾರಕ್ಕೆ ಕಾರಣ ಎಂದರು.
ಏಳಕ್ಕೆ ಏಳು ಕ್ಷೇತ್ರದಲ್ಲೂ ಬಹಳ ಅಂತರದಿಂದ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು ಮಂಡ್ಯ ಜನ. ಅಂದು ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದೆ. ಮೊದಲ ಬಜೆಟ್ ಮಾಡಲು ಅವಕಾಶ ಕೊಡಲಿಲ್ಲ. ನಮ್ಮ ಹಳೇ ಬಜೆಟ್ ಮುಂದುವರಿಸಿ ಅಂದ್ರು. ಸ್ವತಂತ್ರವಾಗಿ ಸರ್ಕಾರ ನಡೆಸಲು ಬಿಡಲಿಲ್ಲ. ಪ್ರಧಾನಿಯಾಗಿ ಅದ್ಭುತವಾದ ಕಾರ್ಯಕ್ರಮ ಕೊಟ್ಟರು. ದೇವೇಗೌಡರು ಎಂದೂ ಸ್ವಾಭಿಮಾನ ಬಿಟ್ಟುಕೊಡಲಿಲ್ಲ. ದೇವೇಗೌಡರ ಬಗ್ಗೆ ಲಘುವಾಗಿ ಮಾತಾಡ್ತಾರೆ. ಇವತ್ತು ಎರಡೂ ಕಡೆಯೂ ಗ್ಯಾರಂಟಿ ಅಂತಾರೆ. ಕೇಂದ್ರದೊಂದು ಗ್ಯಾರಂಟಿ, ರಾಜ್ಯದ್ದು ಒಂದು ಗ್ಯಾರಂಟಿ. ಫ್ರೀ ಕರೆಂಟ್ ಅಂತಾರೆ. ಅದರಲ್ಲಿ ದೊಡ್ಡ ಸಮಸ್ಯೆ ಇದೆ. ಗ್ಯಾರಂಟಿ ಯೋಜನೆ ಅನ್ನೋದು ಬೋಗಸ್ ಎಂದು ಹೇಳಿದರು.
ಜಾಹೀರಾತಿನಲ್ಲಿ ಬರೀ ಸುಳ್ಳುಗಳನ್ನೇ ಹೇಳ್ತಿದ್ದಾರೆ. ನಿತ್ಯವೂ ಎದ್ದ ತಕ್ಷಣ ಪೇಪರ್ನಲ್ಲಿ ಅವರ ಫೋಟೋ ನೋಡ್ಬೇಕು. ಒಂದು ವರ್ಷದಿಂದ ಕೋಟ್ಯಂತರ ರೂಪಾಯಿ ಜಾಹೀರಾತು ಕೊಟ್ಟಿದ್ದಾರೆ. ಜಾಹೀರಾತಿಗೆ ಕೊಟ್ಟ ಹಣದಿಂದ ಹಲವು ಗ್ರಾಮಗಳ ಅಭಿವೃದ್ಧಿ ಮಾಡಬಹುದಿತ್ತು. ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನ ಜಾಹೀರಾತಿಗೆ ಪೋಲು ಮಾಡ್ತಿದ್ದಾರೆ. ಸಿದ್ದು ಸರ್ಕಾರದಲ್ಲಿ ಮಂಡ್ಯ ಜಿಲ್ಲೆಯ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ್ರು. ಎಲ್ಲರ ಮನೆಗೆ ಹೋಗಿ ಬಂದೆ. ಇವರು ನನ್ನ ಕೇಳ್ತಾರೆ ಮಂಡ್ಯಕ್ಕೆ ಏನು ಕೊಡುಗೆ ಅಂತಾ ಎಂದರು.
ಮಂಡ್ಯಕ್ಕೆ ಕೊಟ್ಟ ಅನುದಾನವನ್ನ ಮಂಡ್ಯ ಬಜೆಟ್ ಅಂತಾ ಹೀಯಾಳಿಸಿದ್ರು. ಇವಾಗ ನಾಟಿ ಸ್ಟೈಲ್ನಲ್ಲಿ ಚುನಾವಣೆ ಮಾಡ್ತಾರಂತೆ. ಇವರಿಗೆಲ್ಲ ನಾವು ಏನು ಅನ್ಯಾಯ ಮಾಡಿದ್ದು. ಚುನಾವಣೆ ವಿಷಯದಲ್ಲಿ ಒಂದು ಮಾತು ಹೇಳ್ತೀನಿ. ಅಂಬರೀಶ್ ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಪಾರ್ಲಿಮೆಂಟ್ ಪ್ರವೇಶ ಮಾಡಿದರು. ನಾನು ಸಿಎಂ ಆಗಿದ್ದಾಗಲೇ ರಾಜ್ಕುಮಾರ್, ಅಂಬರೀಶ್ ನಿಧನರಾದರು. ರಾಜ್ ಸಮಾಧಿ ಮಾಡಿದ್ದು ನಾನು. ಅಂಬರೀಶ್ ಸಮಾಧಿಗೂ ಜಾಗ ಗುರುತಿಸಿ, ಗೌರವ ಕೊಟ್ಟೆ. ವಿಷ್ಣುವರ್ಧನ್ ಸಮಾಧಿ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದರು.
ಇದನ್ನೂ ಓದಿ : ಮಂಡ್ಯ, ಕೋಲಾರ - ಹಾಸನ ಕ್ಷೇತ್ರಗಳು ಜೆಡಿಎಸ್ಗೆ: ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ