ಹಾಸನ: "ನಾನು ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಲ್ಲ. ರಾಜ್ಯ ಜನತೆ ಸರ್ಕಾರಗಳನ್ನು ಎಂದೂ ಸಹ ದಾರಿದ್ರ್ಯವಾಗಿ ಆಡಳಿತ ನಡೆಸುವಂತಹ ವಾತಾವರಣ ನಿರ್ಮಾಣ ಮಾಡಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಹಾಸನ ತಾಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿ, "ಆಡಳಿತ ನಡೆಸುತ್ತಿರುವವರು ನಾಡಿನ ಜನತೆ ಕಟ್ಟುತ್ತಿರುವ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಜನರ ಸಮಸ್ಯೆಗಳು ದೊಡ್ಡಮಟ್ಟದಲ್ಲಿ ಬೆಳೆಯುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ನಾನು ಹೇಳಲ್ಲ" ಎಂದರು.
"ರಾಜ್ಯದ ಖಜಾನೆ ಸಂಪತ್ಭರಿತವಾಗಿದೆ. ಆದರೆ ಇಲ್ಲಿ ಜನಸಾಮಾನ್ಯರ ಬದುಕನ್ನು ಕಟ್ಟುವುದಕ್ಕೆ ಯಾವ ರೀತಿ ಕಾರ್ಯಕ್ರಮ ಕೊಡಬೇಕು ಎಂಬುದು ಮುಖ್ಯ. ಇತ್ತೀಚಿಗೆ ರಾಜಕೀಯ ಸಂಘರ್ಷ ನಡೆಯುತ್ತಿದ್ದು, ಕೇಂದ್ರ-ರಾಜ್ಯ ಸರ್ಕಾರದ ನಡುವೆ ವಾಗ್ದಾಳಿ ನಡೆಯುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಫೆ.16 ಬಜೆಟ್ ಮಂಡನೆಗೆ ಸಮಯ ನಿಗದಿ ಮಾಡಿದ್ದು, ವಿಧಾನಸಭೆ ಕಲಾಪದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ತೀರ್ಮಾನ ಮಾಡಿದ್ದೇನೆ" ಎಂದು ಹೇಳಿದರು.
"ಅಂಕಿ-ಅಂಶಗಳನ್ನಿಟ್ಟುಕೊಂಡು ಚರ್ಚೆ ಮಾಡ್ತೀನಿ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣ ಕೊಡುವ ವ್ಯವಸ್ಥೆ ಆರಂಭವಾಗಿದ್ದು ಯಾವಾಗ? ಈಗ ದೊಡ್ಡಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ನೀವೇ. ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳಿತ್ತಿದ್ದೀರಿ" ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಅಸಮಾಧಾನ ಹೊರಹಾಕಿದ್ದಾರೆ.
"1952 ಸಂವಿಧಾನದಲ್ಲಿ ಸಂಸ್ಥೆಯನ್ನ ಪ್ರಾರಂಭ ಮಾಡಿದ್ರು. ಅಲ್ಲಿಂದ ಚರ್ಚೆ ಮಾಡಲು ಹೋದ್ರೆ ದೊಡ್ಡ ಕಥೆಯಿದೆ. ಎನ್‌ಡಿಆರ್‌ಎಫ್‌ನಿಂದ ಬಿಡಿಗಾಸು ಕೊಟ್ಟಿಲ್ಲ ಅಂತಾರೆ. ಇವರಿಗೆ ರಾಜಕೀಯ ಗೊತ್ತಿಲ್ಲದೆ ಇದೆಯಾ? ವಿಶೇಷ ಅನುದಾನ ಕೆಲವು ಬಾರಿ ಕೊಟ್ಟಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಮೈತ್ರಿ ವಿಚಾರದಲ್ಲಿ ಏನೂ ಸಮಸ್ಯೆ ಇಲ್ಲ, ನನಗೆ ಅದು ಮುಖ್ಯ ಅಲ್ಲ. ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಬೇಕಿರೋದು ಈ ಭ್ರಷ್ಟ ಸರ್ಕಾರ ತೆಗೆಯಬೇಕು ಅನ್ನೋದು. ರಾಜ್ಯದಲ್ಲಿ 28ಕ್ಕೆ 28 ಗೆಲ್ಲಬೇಕು. ಎನ್ಡಿಎ ಅನ್ನು ಸಂಪೂರ್ಣವಾಗಿ ಗೆಲ್ಲಿಸುವುದು ನಮ್ಮ ಗುರಿ. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಸೀಟ್ ಪಡೆಯುವ ಅವಶ್ಯಕತೆ ನಮಗೆ ಇಲ್ಲ. ಮಂಡ್ಯದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರ ಕುಟುಂಬಕ್ಕೆ ಟಿಕೆಟ್ ಪಡೆಯುವ ಯತ್ನ ನಡೆದಿದೆ ಎಂದು ನಿತ್ಯ ಧಾರಾವಾಹಿ ನಡೆಯುತ್ತಿದೆ" ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ: ಸರ್ಕಾರ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ: ಅಶೋಕ್ ಆರೋಪ