ಬೆಂಗಳೂರು : ರಾಜ್ಯ ಬಿಜೆಪಿಯ ಸರಳ ಸಜ್ಜನಿಕೆಯ ರಾಜಕಾರಣಿ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 72ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಸಂಜಯನಗರ ನಿವಾಸದ ಸಮೀಪದಲ್ಲಿ ಸದಾನಂದಗೌಡ ಅವರನ್ನು ಕುದುರೆ ಮೇಲೆ ಮೆರವಣಿಗೆ ಮಾಡಿದ ಅಭಿಮಾನಿಗಳು ಸಂಭ್ರಮಿಸಿದರು. ನಂತರ ಡಿವಿಎಸ್ ಕೇಕ್ ಕತ್ತರಿಸಿ ಅಭಿಮಾನಿಗಳು, ಹಿತೈಷಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿದರು.
ಈ ವೇಳೆ ಸದಾನಂದಗೌಡರ ನಿವಾಸಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಮೈಸೂರು ಪೇಟಾ, ಶಾಲು, ಹಾರ ಹಾಕಿ ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು. ಶಾಸಕ ಕೆ. ಗೋಪಾಲಯ್ಯ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್, ಮಾಜಿ ಅಧ್ಯಕ್ಷ ನಾರಾಯಣ ಗೌಡ, ಚುನಾವಣಾ ಸಂಚಾಲಕ ಸಚ್ಚಿದಾನಂದ ಮೂರ್ತಿ ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಕೂಡ ಆಗಮಿಸಿ ಸದಾನಂದ ಗೌಡ ಅವರಿಗೆ ಶುಭ ಕೋರಿದರು.
ಬಿಜೆಪಿ ನಾಯಕರಿಂದ ಶುಭ ಕೋರಿಕೆ : ಸದಾನಂದಗೌಡರಿಗೆ ಜನ್ಮದಿನದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರು ಶುಭಾಶಯ ತಿಳಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಆನೇಕ ನಾಯಕರು ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆ ಮಾತನಾಡಿ, ಸದಾನಂದಗೌಡ ಅವರನ್ನು ನಾನು ವಿದ್ಯಾರ್ಥಿ ಇದ್ದಾಗಿನಿಂದಲೂ ನೋಡಿದ್ದೇನೆ. ಇಂದು ಅವರ ಹುಟ್ಟುಹಬ್ಬದ ಹಿನ್ನೆಲೆ ಶುಭಾಶಯ ಕೋರಿದ್ದೇನೆ. ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲ ಗೌರವ, ಸ್ಥಾನಮಾನ ಸಿಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಅವರ ಕ್ಷೇತ್ರವನ್ನು ನನಗೆ ಬಿಟ್ಟು ಕೊಟ್ಟಿದ್ದಾರೆ. ಮುಂದೆ ಅವರಿಗೆ ಅಧಿಕಾರ ಸಿಗಲಿ ಎಂದು ಹಾರೈಸಿದರು.
ಸದಾನಂದಗೌಡ ಅವರನ್ನು ಕಾಂಗ್ರೆಸ್ ಸಂಪರ್ಕ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಅವರಿಗೆ ಅಭ್ಯರ್ಥಿಗಳು ಇಲ್ಲ. ಹತಾಶೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ನವರು ಯಾರನ್ನು ಸಂಪರ್ಕ ಮಾಡುತ್ತಿದ್ದಾರೆ ಗೊತ್ತಿಲ್ಲ. ಸದಾನಂದ ಗೌಡರು ಸಿಎಂ ಆದವರು. ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿ ವಹಿಸಿದವರು. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಅನ್ನುವುದು ಎಲ್ಲರ ಗುರಿ. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದರು.
ಶಾಸಕ ಎಸ್.ಟಿ ಸೋಮಶೇಖರ್ ಅವರ ವಿರುದ್ಧ ಕ್ರಮ ಆಗದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಕ್ರಮವನ್ನು ನಾವು ಮಾತ್ರವಲ್ಲ, ಸ್ಪೀಕರ್ ಅವರು ತೆಗೆದುಕೊಳ್ಳಬೇಕು. ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ ಮೇಲೆ ಅವರೇ ಹೊರಗೆ ಹೋಗಬೇಕಿತ್ತು. ಈಗ ಚುನಾವಣೆ ಮಾಡುತ್ತಿದ್ದೇವೆ. ಮುಂದೆ ಏನು ಮಾಡಬೇಕೋ ಮಾಡುತ್ತೇವೆ. ನಾವ್ಯಾರು ಕೂಡ ವಲಸಿಗರಲ್ಲ. ನಾನು ಯಶವಂತಪುರ ಎಂಎಲ್‌ಎ ಆಗಿದ್ದೆ. ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ವಲಸಿಗರು ಅನ್ನೋ ಪ್ರಶ್ನೆ ಬರೋದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದನ್ನೂ ಓದಿ : ನಾಳೆ ಮಹತ್ವದ ಸುದ್ದಿಗೋಷ್ಟಿ ಕರೆದ ಸದಾನಂದ ಗೌಡ: ಮುಂದಿನ ರಾಜಕೀಯ ನಿರ್ಧಾರ ಪ್ರಕಟ?