ಹಾವೇರಿ: "ರಾತ್ರಿ ರಾಜಕಾರಣ ಪರಿಚಯ ಮಾಡಿಕೊಟ್ಟು ಅದನ್ನು ಕರಗತ ಮಾಡಿದೋರೇ ಕಾಂಗ್ರೆಸ್ನವರು" ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, "ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ತನ್ನ ಕೆಲಸ ತಾನು ಮಾಡುತ್ತಿದೆ. ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟವರು ಯಾರು? ದಾಖಲಾತಿಯಲ್ಲಿ ವಕ್ಫ್ ಎಂದು ನಮೂದು ಮಾಡಿದವರು ಯಾರು? ವಿಜಯಪುರ ಜಿಲ್ಲೆಯಲ್ಲಿ ರೈತರ ಭೂಮಿಗಳು ವಕ್ಫ್ ಆಸ್ತಿ ಎಂದಾಗಿದ್ದು 2024ರಲ್ಲಿ. ಅದನ್ನು ಬಿಜೆಪಿಯವರು ಮಾಡ್ತರಾ? ಎಂದು ಪ್ರಶ್ನಿಸಿದರು.
"ತಾವು ಮಾಡುವ ತಪ್ಪುಗಳನ್ನು, ಲೋಪಗಳನ್ನು, ಓಲೈಕೆ ರಾಜಕಾರಣ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ನವರು ಬಿಜೆಪಿ ಮೇಲೆ ಹಾಕುತ್ತಿದ್ದಾರೆ. ಇದರ ಹಿಂದೆ ತುಷ್ಟೀಕರಣ ರಾಜಕಾರಣ ಇದೆ. ಜನ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ" ಎಂದು ಆರೋಪಿಸಿದರು.
"ಬಿಜೆಪಿ ದುಡ್ಡು ಹಂಚೋದನ್ನು ತಡೆಯಲೆಂದೇ ಸಚಿವರ ನಿಯೋಜನೆ ಮಾಡಲಾಗಿದೆ ಎನ್ನುವ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, "ನನಗೆ ಹಾಸ್ಯಾಸ್ಪದ ಅನಿಸುತ್ತಿದೆ. ಎಲೆಕ್ಷನ್ ಕಮಿಷನ್ ಇದೆ. ಪೊಲೀಸ್ ಇದೆ. ಮಿಷನರಿ ಅವರ ಕೈಲಿದೆ. ಸಚಿವರು ಆಡಳಿತ ಮಾಡುವುದನ್ನು ಬಿಟ್ಟು ಈ ಥರ ಮಾಡುತ್ತಾರೆ ಎಂದರೆ ಹಾಸ್ಯಾಸ್ಪದ. ಸಚಿವರು ಹಣದ ಚೀಲ ತಗೊಂಡು ಬರ್ತಾರೆ" ಎಂದು ಆರೋಪಿಸಿದರು.
ಸಚಿವ ಶಿವಾನಂದ ಪಾಟೀಲ್ ನೂರು ಕೋಟಿ ಅನುದಾನ ಶಿಗ್ಗಾಂವಿಗೆ ಯಾವಾಗ ಕೊಟ್ಟಿದ್ದಾರೆ? ಹುಡುಕಿ ಕೊಡಲಿ. ಯಾವ ಯಾವ ದಿನಾಂಕಗಳಲ್ಲಿ ಎಷ್ಟು ಅನುದಾನ ಕೊಟ್ಟಿದಾರೆ? ಅದನ್ನು ಯಾಕೆ ಮುಚ್ಚಿಡ್ತಾ ಇದ್ದಾರೆ? ಬಹಿರಂಗ ಮಾಡಲಿ" ಎಂದು ಸವಾಲೆಸೆದರು.
"ನಮ್ಮನ್ನು ಜನ ಸಾಗರವೇ ಬೆಂಬಲಿಸಲಿದೆ. ಕೇತ್ರದಲ್ಲಿ ಉತ್ತಮ ವಾತಾವರಣವಿದೆ" ಎಂದು ತಿಳಿಸಿದರು.
ಶಿಗ್ಗಾಂವಿ ಜನ ಬದಲಾವಣೆ ಬಯಸುತ್ತಿದ್ದಾರೆ: "ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಮುಸ್ಲಿಂ ಎಂದು ಮಾತನಾಡಿದ್ದಕ್ಕೆ ಹೈಕೋರ್ಟ್ಗೆ ಬರುವಂತಾಗಿದೆ" ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಶಿಗ್ಗಾಂವ್‌ನಲ್ಲಿ ಮಾತನಾಡಿದ ಅವರು, "ನಮಗೆ ಮುಸ್ಲಿಂ ಸಚಿವರು ಎಂದು ಹೇಳುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ಹಾಗೂ ನಾವು, ಎಲ್ಲರೂ ಪ್ರಜಾಪ್ರಭುತ್ವದಲ್ಲಿದ್ದೇವೆ. ನಾವು ಜಾತ್ಯತೀತ ದೇಶದಲ್ಲಿದ್ದೇವೆ. ಪ್ರಜಾಪ್ರಭುತ್ವದ ಆಶಯದಂತೆ ನಾವು ಇರಬೇಕು" ಎಂದು ತಿಳಿಸಿದರು.
"ಪ್ರಸ್ತುತ ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆಯಲ್ಲಿ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಶಾಸಕರಾಗಬೇಕು ಎನ್ನುವ ಆಸೆ ಇರುತ್ತೆ. ಹಿಗಾಗಿಯೇ ಕ್ಷೇತ್ರದಲ್ಲಿ 18 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈಗ ಟಿಕೆಟ್ ಸಿಕ್ಕಿರುವ ಪಠಾಣ್ ಸಹ ಒಬ್ಬ ಕಾರ್ಯಕರ್ತ. ಗ್ಯಾರಂಟಿ ವರ್ಕ್ ಆಗಲ್ಲ. ಮೂರು ಲಕ್ಷ ನಾಲ್ಕು ಲಕ್ಷ ಅಂತರದಿಂದ ಗೆಲ್ಲುತ್ತೇವೆ ಎಂದರು. ಆದರೆ ಎಷ್ಟು ಅಂತರದಿಂದ ಗೆದ್ದರು?" ಎಂದು ಸಚಿವ ಪಾಟೀಲ್ ಪ್ರಶ್ನಿಸಿದರು.
"ಗ್ಯಾರಂಟಿ ಇರುವುದಕ್ಕೆ ರಾಜ್ಯದಲ್ಲಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾದರು. ಹಾವೇರಿ ಲೋಕಸಭಾ ಕ್ಷೇತ್ರ ಬಿಡಿ ಸ್ವತಃ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಶಿಗ್ಗಾಂವ್ ಕ್ಷೇತ್ರದಲ್ಲಿ ಬಿಜೆಪಿಗೆ ಕಡಿಮೆ ಮತಗಳು ಏಕೆ ಬಂದವು? ಶಿಗ್ಗಾಂವ್‌ನಲ್ಲಿ ಬಿಜೆಪಿಗೆ ಮತಗಳು ಯಾಕೆ ಕಡಿಮೆ ಬಂದವು ಎನ್ನುವುದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೇಳಬೇಕು" ಎಂದು ಸಚಿವ ಪಾಟೀಲ್ ವ್ಯಂಗ್ಯವಾಡಿದರು.
"ಲೋಕಸಭೆ ಚುನಾವಣೆಯಲ್ಲೂ ನಮಗೆ ಗ್ಯಾರಂಟಿ ಪ್ಲಸ್ ಆಗಿದೆ. ಅದಕ್ಕಾಗಿ ಒಂದು ಕ್ಷೇತ್ರದಿಂದ 9 ಕ್ಷೇತ್ರಗಳನ್ನು ನಮ್ಮದಾಗಿಸಿಕೊಂಡಿದ್ದೇವೆ. ಅಚ್ಚೇ ದಿನ ಅಚ್ಚೇ ದಿನ ಎಂದು ಹೇಳಿದವರ ಕೈಯಿಂದ ಟೊಮ್ಯಾಟೋ, ಉಳ್ಳಾಗಡಿ ದರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಚಿನ್ನ ಕಬ್ಬಿಣ ಪೆಟ್ರೋಲ್ ಇರಲಿ, ತರಕಾರಿ ದರ ನಿಯಂತ್ರಣ ಮಾಡಲಾಗುತ್ತಿಲ್ಲ. ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಿದವರು ಬಿಜೆಪಿಯವರು. ಅದಕ್ಕೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು, ಅವರೇ ಉತ್ತರ ನೀಡಬೇಕು. ಕ್ಷೇತ್ರದಲ್ಲಿ ನಾವು ಗೆಲುವು ಮಾತ್ರ ನೋಡುತ್ತಿದ್ದೇವೆ ಅಂತರ ನೋಡುತ್ತಿಲ್ಲ" ಎಂದರು.
ಇದನ್ನೂ ಓದಿ: ಮುಡಾ ಮಾಜಿ ಆಯುಕ್ತ ನಟೇಶ್ ಇ.ಡಿ ವಶಕ್ಕೆ
ಪ್ರತಾಪ್ ಸಿಂಹಗೆ ಸಚಿವ ಜಾರಕಿಹೊಳಿ ತಿರುಗೇಟು: ಮುಸ್ಲಿಂರಿಗೆ ವಕ್ಫ್ ಆಸ್ತಿ ಎಲ್ಲಿಂದ ಬಂತು? ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಶಿಗ್ಗಾಂವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ ಜಾರಕಿಹೊಳಿ, "ಅದು ಅವರಿಗೆ ಹೇಗೆ ಬಂತು ಎನ್ನುವುದಕ್ಕೆ ಇತಿಹಾಸ ಬೇರೆ ಇದೆ, ಹುಡುಕಲು ಆಗಲ್ಲ. ಎರಡುನೂರು ವರ್ಷಗಳ ಹಿಂದೆ ಹೋಗಬೇಕು. ಅದರ ಬಗ್ಗೆ ಚರ್ಚಿಸಲು ಸರಿಯಾದ ಸಮಯವಲ್ಲ. ಪ್ರತ್ಯೇಕವಾದ ವೇದಿಕೆಯಲ್ಲಿ ಅದರ ಬಗ್ಗೆ ಚರ್ಚಿಸೋಣ" ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
"ವಕ್ಫ್ ಬೋರ್ಡ್ ಆಸ್ತಿ ವಿಚಾರದಲ್ಲಿ ನೋಟಿಸ್ ಕೊಟ್ಟಿದ್ದು ಯಾವಾಗ? ಯಾವಾಗ ಕೊಟ್ಟರೆಂದು ಬಿಜೆಪಿಯವರನ್ನು ಕೇಳಿ. ಈಗ ಎದ್ದಿರುವ ಸಮಸ್ಯೆಯನ್ನು ಸರ್ಕಾರ ಪರಿಹಾರ ಮಾಡುತ್ತದೆ. 2022ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ನೋಟಿಸ್ ಕೊಟ್ಟಿದ್ದು" ಎಂದು ಆರೋಪಿಸಿದರು.
20 ವರ್ಷಗಳಿಂದ ಶಿಗ್ಗಾಂವಿಯಲ್ಲಿ ಅಧಿಕಾರ ವಂಚಿತರಾಗಿದ್ದೇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿಯವರದ್ದು ಪರ್ಮನೆಂಟ್ ಗ್ಯಾರಂಟಿಯೆಂದರೆ ರಾಜ್ಯದ ಜನ ಯಾಕೆ ಅವರನ್ನು ಮನೆಗೆ ಕಳಸಿದರು? ಬಿಜೆಪಿ ಕಾರ್ಯಕ್ರಮಗಳೇ ಟೆಂಪರರಿ. ಬಿಜೆಪಿಯವರು ಹೇಳಿಕೊಳ್ಳುವಂಥ ಶಾಶ್ವತ ಯೋಜನೆ ಯಾವುದೂ ಮಾಡಿಲ್ಲ. ಬಿಜೆಪಿಯವರು ದುಡ್ಡು ಖರ್ಚು ಮಾಡಬಾರದು ಅಂತಾನೇ ಸಚಿವರನ್ನು ಕಾಯಲಿಕ್ಕೆ ಹಾಕಿದ್ದೇವೆ. 10 ಜನ ಸಚಿವರು, 30 ಕ್ಕೂ ಹೆಚ್ಚು ಶಾಸಕರನ್ನು ನಿಯೋಜಿಸಲಾಗಿದೆ. ಯಾರು ದುಡ್ಡು ಹಂಚುತ್ತಾರೆ ಎಂಬುದು ನವೆಂಬರ್ 11, 12ಕ್ಕೆ ಗೊತ್ತಾಗುತ್ತದೆ" ಎಂದು ಸತೀಶ್ ತಿಳಿಸಿದರು.
"ಅಜ್ಜಂಪೀರ್ ಖಾದ್ರಿ ಅವರನ್ನು ನಾವು ಹಿಡಿದುಕೊಂಡಿಲ್ಲ. ನಾವು ಇಟ್ಟುಕೊಂಡಿಲ್ಲ. ಖಾದ್ರಿ ಹಾಗೂ ಜಮೀರ್ ಇಬ್ಬರೂ ಸಂಗ್ಯಾ ಬಾಳ್ಯಾ ಇದ್ದಂಗೆ ಇದ್ದಾರೆ. ಇಬ್ಬರೂ ಸ್ನೇಹಿತರು. ಖಾದ್ರಿ ನಮ್ಮ ಪರ ಬರ್ತಾರೆ ಎಂಬ ಆಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
"ಶಿಗ್ಗಾಂವಿ ಕ್ಷೇತ್ರದಲ್ಲಿ ಏನು ತಂತ್ರಗಾರಿಕೆ ಮಾಡುತ್ತಿದ್ದೇವೆ ಎನ್ನುವುದನ್ನು ಹೇಳಲು ಆಗಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಶಿವಮೊಗ್ಗ: ಭಾರಿ ಮಳೆಗೆ ಜಿಲ್ಲೆಯಾದ್ಯಂತ 353 ಹೆಕ್ಟೇರ್ ಭತ್ತದ ಬೆಳೆ ಹಾನಿ