ಮೈಸೂರು: ನನಗೀಗ 82 ವರ್ಷ ವಯಸ್ಸಾಗಿದೆ, ಇನ್ನೂ ಕೈ-ಕಾಲು ಗಟ್ಟಿ ಇವೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಮನೆ ಸೇರಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಕೊನೆ ಉಸಿರು ಇರುವವರೆಗೂ ರಾಜಕೀಯ ಮಾಡ್ತೀನಿ. ನಿಮಗೆ ತಾಕತ್ ಇದೆಯಾ, ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸುತ್ತೀರಾ ಎಂದು ಗುಡುಗಿದರು.
ನಿಮ್ಮ ಸರ್ಕಾರ ದಿವಾಳಿಯಾಗಿದೆ. ನೀವು ಮನಬಂದಂತೆ ಮಾತನಾಡುತ್ತೀರಾ. ಹೇ ವಿಜಯೇಂದ್ರ, ಅಶೋಕಾ ಅಂತೀರಾ. ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಪಾಪದ ಕೊಡ ತುಂಬಿ ತುಳುಕುತ್ತಿದೆ. ನಿಮ್ಮ ಯೋಗ್ಯತೆಗೆ ಒಂದು ಅಭಿವೃದ್ಧಿ ಕಾರ್ಯ ತೋರಿಸಿ. ನಿವೇಶನದ ಬದಲು 62 ಕೋಟಿ ರೂ. ಕೊಡಿ ಎಂದು ಕೇಳುತ್ತಿರುವ ಸಿದ್ದರಾಮಯ್ಯ ಅವರೇ, ಯಾರಪ್ಪನ ದುಡ್ಡು ಅಂತಾ ನಿಮಗೆ ಹಣ ಕೊಡಬೇಕು? ಎಂದು ಬಿಎಸ್ವೈ ಪ್ರಶ್ನಿಸಿದರು.
ಸಿಎಂ ಹಾಗೂ ಡಿಸಿಎಂ ದರೋಡೆ, ಲೂಟಿಗೆ ಇಳಿದಿದ್ದಾರೆ. ಇವರ ಪಾಪದ ಕೊಡಗಳು ತುಂಬಿವೆ. ಇದು ಹಗಲು ದರೋಡೆಯ ಭ್ರಷ್ಟ ಸರ್ಕಾರ. ಈಗ ಚುನಾವಣೆ ನಡೆದರೂ ಬಿಜೆಪಿ, ಜೆಡಿಎಸ್ ಮೈತ್ರಿಗೆ 130 ಸ್ಥಾನ ಬರುತ್ತವೆ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.
ನಿಮ್ಮ ಬೆದರಿಕೆಗಳಿಗೆ ಹೆದರಲ್ಲ: ಬಿ.ವೈ.ವಿಜಯೇಂದ್ರ
ಪ್ರತಿಪಕ್ಷಗಳು ಹಗರಣಗಳನ್ನ ಬಿಚ್ಚಿಡುತ್ತೇವೆ ಎಂದು ಸಿಎಂ ಹಾಗೂ ಡಿಸಿಎಂ ಹೆದರಿಸುತ್ತಿದ್ದಾರೆ. ಇವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು.
ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ವಿರುದ್ಧದ ಹೋರಾಟವಲ್ಲ. ಭ್ರಷ್ಟ ಮುಖ್ಯಮಂತ್ರಿ ವಿರುದ್ಧದ ಹೋರಾಟವಾಗಿದೆ. ರಾಜ್ಯದ ಜನರಿಗೆ ಭ್ರಷ್ಟ ಕಾಂಗ್ರೆಸ್ನಿಂದ ಅನ್ಯಾಯವಾಗಿದೆ. ಅದಕ್ಕಾಗಿ ಈ ಸರ್ಕಾರವನ್ನ ಕಿತ್ತುಹಾಕಲು ಹೋರಾಟ ಮಾಡುತ್ತಿದ್ದೇವೆ ಹೊರತು ಅಧಿಕಾರ ದಾಹ ಅಲ್ಲ ಎಂದು ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.
ಇದೊಂದು ದರಿದ್ರ ಸರ್ಕಾರ. ಬಡವರ ಕಲ್ಯಾಣದ ಹಣವನ್ನ ನುಂಗಿದೆ. ಈ ಸರ್ಕಾರದಿಂದ ಯಾವುದೇ ಸಮುದಾಯದ ಜನ ಸಂತೋಷವಾಗಿಲ್ಲ. ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡದೆ ಓಡಿಹೋಗುವ ಮುಖ್ಯಮಂತ್ರಿಗಳು ಪ್ರಾಮಾಣಿಕವಾಗಿದ್ದಾರೆ ಯಾಕೆ ಓಡಿ ಹೋಗುತ್ತಿದ್ದರು ಎಂದು ಪ್ರಶ್ನೆ ಮಾಡಿ ಬಿ.ವೈ. ವಿಜೇಯೇಂದ್ರ ಮುಡಾ, ವಾಲ್ಮೀಕಿ ಹಗರಣ ಬಿಚ್ಚಿಡುತ್ತಿದ್ದಂತೆ ವಿರೋಧ ಪಕ್ಷಗಳ ಹಗರಣವನ್ನ ಬಿಚ್ಚಿಡುತ್ತೇವೆ ಎಂದು ವಿರೋಧ ಪಕ್ಷಗಳಿಗೆ ಬೆದರಿಕೆ ಹಾಕುತ್ತಾರೆ. ಅವರಿಗೆ ವಿರೋಧ ಪಕ್ಷಗಳನ್ನ ಕಂಡರೆ ಭಯ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗಳೇ ನಿಮ್ಮ ಹೇಳಿಕೆ ವಾಪಸ್ ಪಡೆಯಿರಿ: ಯಡಿಯೂರಪ್ಪನವರು ರಾಜಕೀಯ ನಿವೃತ್ತಿ ಪಡೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾಕೆಂದರೆ ಯಡಿಯೂರಪ್ಪ ಅವರನ್ನ ಕಂಡರೆ ಸಿದ್ದರಾಮಯ್ಯನವರಿಗೆ ಭಯವೇ? ಯಡಿಯೂರಪ್ಪ ಅವರ ಮೇಲೆ 15 ಎಫ್ಆರ್ಐ ಹಾಕಿ, ರಾಜಕೀಯ ಪಿತೂರಿ ಮಾಡಿದರೂ ಅವರು ಹೆದರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಯಡಿಯೂರಪ್ಪ ನವರ ರಾಜಕೀಯ ನಿವೃತ್ತಿ ಹೇಳಿಕೆಯನ್ನ ವಾಪಸ್ ಪಡೆಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಗ್ರಹಿಸಿದರು.
ಇದನ್ನೂ ಓದಿ: ಆರೋಪಗಳ ವಿರುದ್ಧ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಸಿದ್ದ : ಮುಖ್ಯಮಂತ್ರಿ ಸಿದ್ದರಾಮಯ್ಯ - CM Vists Chamundeshwari Temple