ಬೆಂಗಳೂರು : ದಿವ್ಯಾಂಗರಿಗೆ ಅವಕಾಶ ನೀಡಿದರೆ ಅವರು ಸಾಧಿಸುವ ಛಲ ಹೊಂದಿದ್ದು, ಅವರು ಸ್ವಾಭಿಮಾನದಿಂದ ಬದುಕುತ್ತಾರೆ. ಅವರು ನಿಜವಾದ ಯೋಗಿಗಳು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಚಾಮರಾಜಪೇಟೆಯ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಸಕ್ಷಮ ವಿಶೇಷ ಚೇತನರ ದಕ್ಷಿಣ ಪ್ರಾಂತ ಅಧಿವೇಶನ ಉದ್ಘಾಟಿಸಿ ಮಾತನಾಡಿ, ವಿಕಲಚೇತನ, ವಿಶೇಷ ಚೇತನ ಅಂತ ಕರೆಯುತ್ತೇವೆ. ವಿಶೇಷ ಚೇತನರು ಯಾರು?. ಎಲ್ಲಾ ಅಂಗಾಂಗಳನ್ನು ಹೊಂದಿರುವ ನಾವು ನೆಮ್ಮದಿಯಿಂದ, ಖುಷಿಯಿಂದ ಇದ್ದೇವೆಯೇ?. ಭಗವಂತ ಕೊಟ್ಟಿರುವ ಎಲ್ಲ ಅಂಗಗಳನ್ನು ಸರಿಯಾಗಿ ಬಳಸಿಕೊಂಡಿದ್ದೇವಾ? ಇಎನ್ಟಿ ಪರೀಕ್ಷೆ ಮಾಡಿಸುವವರು ಯಾರು? ಕಣ್ಣಿನ ಪರೀಕ್ಷೆ ಮಾಡಿಸುವವರು ನಾವು ನಿಜವಾದ ದಿವ್ಯಾಂಗರು. ಕೆಲವು ಅಂಗ ಊನ ಇರುವವರು ಛಲದಿಂದ ಬದುಕುತ್ತಾರೆ ಎಂದು ಹೇಳಿದರು.
ನಾವು ಕೆಲವು ಸಾರಿ ಭಿಕ್ಷುಕರಾಗುತ್ತೇವೆ. ರಾಜಕಾರಣಿಗಳು ಟಿಕೆಟ್ ಭಿಕ್ಷೆ ಬೇಡುತ್ತಾರೆ. ವ್ಯಾಪಾರಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಆದರೆ, ದಿವ್ಯಾಂಗರು ಸ್ವಾಭಿಮಾನದಿಂದ ಬದುಕುತ್ತಾರೆ. ದೇಶದ ಜಿಡಿಪಿಗೆ ದಿವ್ಯಾಂಗರ ಕೊಡುಗೆ ಏನು? ಎಂದು ರಾಷ್ಟ್ರಮಟ್ಟದಲ್ಲಿ ಸಮೀಕ್ಷೆಯಾಗಬೇಕು. ಆಗ ಅವರ ಸೇವೆ ಏನಿದೆ? ಅಂತ ಎಲ್ಲರಿಗೂ ಗೊತ್ತಾಗುತ್ತದೆ. ಅವರು ಎಲ್ಲ ರಂಗದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕಲ್ಪನಾಶಕ್ತಿ ಬಹಳ ವಿಸ್ತಾರವಾಗಿರುತ್ತದೆ. ಸಾಮಾನ್ಯ ಮನುಷ್ಯರಿಗಿಂತ ಮಿಗಿಲಾದ ಕಲ್ಪನಾ ಶಕ್ತಿಯನ್ನು ದಿವ್ಯಾಂಗರು ಹೊಂದಿರುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
ನಾನು ಪಂಡಿತ ಪುಟ್ಟರಾಜ ಗವಾಯಿಗಳ ಸಂಪರ್ಕದಲ್ಲಿ ಅವರಿಂದ ಸಾಕಷ್ಟು ಪಡೆದಿದ್ದೇನೆ. ದಿವ್ಯಾಂಗ ಮಕ್ಕಳಲ್ಲಿ ಯಾವಾಗಲೂ ಮುಗ್ದತೆ ಇರುತ್ತದೆ. ನಮ್ಮದು ವಯಸ್ಸಾದಂತೆ ಮುಗ್ದತೆ ಕಡಿಮೆಯಾಗುತ್ತದೆ. ದಿವ್ಯಾಂಗರು ನಿಜವಾದ ಯೋಗಿಗಳು. ದಿವ್ಯಾಂಗರಿಗೆ ಅನುಕಂಪ ಬೇಡ, ಅವಕಾಶ ಕೊಡಬೇಕು. ಅವಕಾಶ ನೀಡಿದರೆ ಸಾಧಿಸುವ ಛಲ ಅವರಿಗಿದೆ ಎಂದರು.
ಸಕ್ಷಮ ಸಂಸ್ಥೆಯ ಸೇವೆ ನೋಡಿ ಪ್ರಶಸ್ತಿ ನೀಡಿದ್ದೆವು : ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆದರೆ, ಅವರಿಗೆ ಸರಿಯಾಗಿ ಮುಟ್ಟಿಸುವ ಕೆಲಸ ಆಗುವುದಿಲ್ಲ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವುದೇ ಯೋಜನೆ ಅಂತಿಮ ವ್ಯಕ್ತಿಗೆ ತಲುಪುವಂತೆ ಮಾಡುವ ಕೆಲಸ ಮಾಡುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಸಕ್ಷಮ ಸಂಸ್ಥೆಯ ಸೇವೆ ನೋಡಿ ಪ್ರಶಸ್ತಿ ನೀಡಿದ್ದೆವು. ಉತ್ತಮ ಕೆಲಸ ಮಾಡುವವರನ್ನು ಗೌರವಿಸುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಉದಯ ಗರುಡಾಚಾರ್ ಹಾಗೂ ಎನ್ ರವಿಕುಮಾರ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಎನ್ಐಎಗೆ ವಹಿಸಿ: ಸರ್ಕಾರಕ್ಕೆ ಬೊಮ್ಮಾಯಿ ಆಗ್ರಹ