ದಾವಣಗೆರೆ: ಜಿಲ್ಲೆಯ ಜಗಳೂರು ಮಾಜಿ ಶಾಸಕ, ಹಿರಿಯ ಬಿಜೆಪಿ ಮುಖಂಡ, ಆರ್.ಎಸ್.ಎಸ್. ಕಟ್ಟಾಳು ಟಿ. ಗುರುಸಿದ್ದನಗೌಡ ಅವರು ಶುಕ್ರವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಹಿಂದೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ವಿರುದ್ಧ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಗಿತ್ತು.
ನಂತರ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಧ್ಯಕ್ಷರಾದ ಬಳಿಕ ಮತ್ತೆ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಡೆಗಣಿಸಿದ್ದರಿಂದ ಟಿ. ಗುರುಸಿದ್ದನಗೌಡ ಅವರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹಾಲಿ ಜಗಳೂರು ಕಾಂಗ್ರೆಸ್ ಶಾಸಕ ದೇವೆಂದ್ರಪ್ಪ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಗುರುಸಿದ್ದನಗೌಡರ ಜೊತೆ ಅವರ ಪುತ್ರ ವೈದ್ಯಕೀಯ ಪ್ರಕೋಷ್ಠದಲ್ಲಿದ್ದ ಡಾ. ಟಿ.ಜಿ. ರವಿಕುಮಾರ್, ಬಿಜೆಪಿ ಮುಖಂಡರುಗಳಾದ ಟಿ.ಜಿ. ಅರವಿಂದ್, ಟಿ.ಜಿ.ಪ್ರವೀಣ್, ಕಕ್ಕರಗೊಳ್ಳದ ಕಲ್ಲಿಂಗಪ್ಪ, ನಾಗರಾಜ ಸ್ವಾಮಿ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಗೌರಿಪುರದ ಶಿವಣ್ಣ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ''ಗುರುಸಿದ್ದನಗೌಡ್ರು ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ'' ಎಂದರು.
ಗುರುಸಿದ್ದನಗೌಡರ ಪುತ್ರ ಡಾ.ಟಿ.ಜಿ. ರವಿಕುಮಾರ್ ಮಾತನಾಡಿ, ''ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಇರುವುದನ್ನು ನಾವು ಖಂಡಿಸುತ್ತಾ ಬಂದೆವು. ವಿದ್ಯಾವಂತರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರೂ ಸಹ ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸಿಲ್ಲ. ಅಲ್ಲದೆ, ಸಂಸದ ಜಿ.ಎಂ. ಸಿದ್ದೇಶ್ವರ ಅವರ ಏಕಸ್ವಾಮ್ಯ ಆಡಳಿತದಿಂದ ಬೇಸತ್ತು ಪಕ್ಷ ತೊರೆದೆವು'' ಎಂದರು.
''ದಾವಣಗೆರೆ ಜಿಲ್ಲೆಗೆ ಒಬ್ಬ ಸಮರ್ಥ ಆಡಳಿತಗಾರರಾದ ಮಲ್ಲಿಕಾರ್ಜುನಂತವರು ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಅವರ ಪತ್ನಿ ವಿದ್ಯಾವಂತರಿದ್ದು, ಲೋಕಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸಿದರೆ ಕ್ಷೇತ್ರಕ್ಕೆ ಅನುಕೂಲವಾಗಲಿದೆ'' ಎಂದು ರವಿಕುಮಾರ್ ಹೇಳಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ: ಬಿಜೆಪಿ ನಾಯಕರಿಗೆ ಟಕ್ಕರ್ - congress convention