ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಪ್ಲಾಂಟೇಷನ್ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ 20 ಎಕರೆ ಜಮೀನನ್ನು ಕೆನರಾ ಬ್ಯಾಂಕ್ ಮತ್ತು ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಸ್ ಜಾರಿ ಮಾಡಿದೆ.
ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲ ಜಿ.ಬಾಲಾಜಿ ನಾಯ್ಡು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತು. ಹಾಗೆಯೇ, ಇತರೆ ಪ್ರತಿವಾದಿಗಳಾದ ಹೆಚ್‌ಎಂಟಿ ಲಿಮಿಟೆಡ್, ಕೆನರಾ ಬ್ಯಾಂಕ್‌ನ ಕೇಂದ್ರ ಕಚೇರಿಯ ವ್ಯಸ್ಥಾಪಕ ನಿರ್ದೇಶಕರು, ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತು. ಅರ್ಜಿಗೆ ಕುರಿಂತೆ ಮುಂದಿನ ವಿಚಾರಣೆ ವೇಳೆ ಅರ್ಜಿ ಕುರಿತಂತೆ ಉತ್ತರ ನೀಡಬೇಕು ಎಂದು ಎಲ್ಲಾ ಪ್ರತಿವಾದಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಆ.19ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, 1896ರ ಜು.29ರಂದು ಅಂದಿನ ಮೈಸೂರು ಸರ್ಕಾರವು ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯಲ್ಲಿ 599 ಎಕರೆ ಜಮೀನನ್ನು ಪೀಣ್ಯ-ಜಾಲಹಳ್ಳಿ ಪ್ಲಾಂಟೇಷನ್ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ಆದರೆ, 1963ರ ಜು.15ರಂದು ರಾಜ್ಯ ಕಂದಾಯ ಇಲಾಖೆಯು ಆ 599 ಎಕರೆ ಪೈಕಿ 180 ಎಕರೆ 26 ಗುಂಟೆ ಜಮೀನನ್ನು, 1965 ಮಾ.27ರಂದು ಪೀಣ್ಯ ಪ್ಲಾಂಟೇಷನ್ ಗ್ರಾಮದ ಸರ್ವೇ ನಂ 2ರಲ್ಲಿನ 77 ಎಕರೆ 20 ಗುಂಟೆ ಜಮೀನನ್ನು ಹೆಚ್‌ಎಂಟಿ ಲಿಮಿಟೆಡ್‌ಗೆ ದಾನವಾಗಿ ನೀಡಿದೆ ಎಂದು ವಿವರಿಸಿದರು. ಅಲ್ಲದೆ, 2001ರಲ್ಲಿ ಹೆಚ್‌ಎಂಟಿ ಲಿಮಿಟೆಡ್ ಪೀಣ್ಯ ಪ್ಲಾಂಟೇಷನ್ ಗ್ರಾಮದ ಸರ್ವೇ ನಂ-21ರಲ್ಲಿನ 19.86 ಎಕರೆ ಖಾಸಗಿ ಏಜೆನ್ಸಿಗಳಿಗೆ ಮಾರಾಟ ಮಾಡಿದೆ. ಇನ್ನೂ ಸರ್ವೇ ನಂ.2ರಲ್ಲಿನ 20 ಎಕರೆ 7 ಗುಂಟೆ ಜಮೀನನ್ನು ಕೆನರಾ ಬ್ಯಾಂಕ್ ಮತ್ತು ಕೆವಿಎನ್ ಫಿಲ್ಮ್ ಪ್ರೊಡೆಕ್ಷನ್ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿವೆ. 2018ರಲ್ಲಿ ಈ ಎಲ್ಲಾ ಜಾಗವು ಅರಣ್ಯ ಜಮೀನು ಎಂಬುದಾಗಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ ಈ ಆದೇಶ ಪಾಲನೆ ಕುರಿತಂತೆ ನ್ಯಾಯಾಲಯಕ್ಕೆ ಅನುಪಾಲನೆ ವರದಿ ಸಲ್ಲಿಸಬೇಕು. ಕೆನರಾ ಬ್ಯಾಂಕ್ ಮತ್ತು ಕೆವಿಎನ್ ಫಿಲ್ಮ್ ಪ್ರೊಡೆಕ್ಷನ್ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿರುವ ಜಮೀನನ್ನು ತೆರವುಗೊಳಿಸಿ ಅರಣ್ಯ ಭೂಮಿಯಾಗಿ ಸಂರಕ್ಷಣೆ ಮಾಡಲು ರಾಜ್ಯ ಅರಣ್ಯ ಇಲಾಖೆ ಹಾಗೂ ಅದರ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಚಿತ್ರ ನಿರ್ಮಾಪಕರಿಗೆ ನೋಟಿಸ್ : ಕೆವಿಎನ್ ಫಿಲ್ಮ್ ಪ್ರೊಡೆಕ್ಷನ್ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿದೆ ಎನ್ನಲಾದ ಜಾಗದಲ್ಲಿ ಸದ್ಯ ನಟ ಯಶ್ ಅವರ ಮುಂದಿನ ಚಿತ್ರವಾದ ‘ಟಾಕ್ಸಿಕ್’ ಚಿತ್ರೀಕರಣಕ್ಕೆ ಅದ್ಧೂರಿ ಸೆಟ್ ಹಾಕಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಹೆಣ್ಣು ಭ್ರೂಣ ಪತ್ತೆಗೆ ಸಹಕಾರ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ - High Court