ಚಾಮರಾಜನಗರ: ಕಳೆದ ಒಂದು ತಿಂಗಳಿನಿಂದ ರೈತರು ಹಾಗೂ ಜನರಿಗೆ ಉಪಟಳ ಕೊಡುತ್ತಿದ್ದ ಚಿರತೆಯನ್ನು ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ಚಿರತೆ ಕಳೆದ ತಿಂಗಳು ನಾಲ್ಕು ಕುರಿಗಳನ್ನು ತಿಂದು ಈ ಭಾಗದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಕಳೆದ ಒಂದು ತಿಂಗಳಿನಿಂದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟು ಕಾರ್ಯಾಚರಣೆ ಕೈಗೊಂಡಿದ್ದರು. ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ಇಲ್ಲವೇ ಮೈಸೂರು ಮೃಗಾಲಯಕ್ಕೆ ಬಿಡಬೇಕು. ಬೇರೆ ಅರಣ್ಯಕ್ಕೆ ಬಿಡಬೇಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಂಜನಗೂಡಿನ ಕೋಣನೂರು ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ- ಬೆಚ್ಚಿಬಿದ್ದ ಕಾರಿನ ಚಾಲಕ: ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕಾರಿನ ಚಾಲಕ ಬೆಚ್ಚಿ ಬೀಳಿಸಿದೆ. ಶುಕ್ರವಾರ ರಾತ್ರಿ 8.45ರ ಸಮಯದಲ್ಲಿ ಕಾರಿನ ಚಾಲಕರೊಬ್ಬರು ಕೋಣನೂರು ಗ್ರಾಮದಿಂದ ಹನುಮನಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತೆರಳುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿತ್ತು. ಇದನ್ನು ಕಂಡ ಕಾರಿನ ಚಾಲಕ ಆತಂಕಗೊಂಡು ಕಾರನ್ನು ನಿಲ್ಲಿಸಿದ್ದಾರೆ.
ಈ ವೇಳೆ ಚಿರತೆ ರಸ್ತೆ ದಾಟುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸುಮಾರು ವರ್ಷಗಳಿಂದ ಕೋಣನೂರು, ಚುಂಚನಹಳ್ಳಿ, ಪಿ.ಮರಹಳ್ಳಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾಕು ಪ್ರಾಣಿಗಳು ಮತ್ತು ಸಾಕು ನಾಯಿಗಳನ್ನು ಚಿರತೆ ಬಲಿ ಪಡೆಯುತ್ತಿದ್ದು, ಗ್ರಾಮಸ್ಥರು ಮತ್ತು ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಸರಿ ಹಿಡಿಯಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಇದನ್ನೂ ಓದಿ: ಗೇಮ್ ಆಡುತ್ತಿದ್ದ ವೇಳೆ ಮನೆಗೆ ನುಗ್ಗಿದ ಚಿರತೆ; ಹೆದರದೇ ಕಾಡುಪ್ರಾಣಿಯನ್ನು ಕೂಡಿಹಾಕಿದ ಹುಡುಗ! ವಿಡಿಯೋ