ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮತ್ತೊಂದೆಡೆ, ಗೇರುಸೊಪ್ಪ ಜಲಾಶಯದಿಂದ ಶರಾವತಿ ನದಿಗೆ ನೀರು ಬಿಟ್ಟ ಪರಿಣಾಮ ಹೊನ್ನಾವರ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಗೇರುಸೊಪ್ಪದಿಂದ ಶುಕ್ರವಾರ 51 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟ ಕಾರಣ ಹೊನ್ನಾವರ ತಾಲೂಕಿನ ಶರಾವತಿ ನದಿ ತೀರದ ಸರಳಗಿ, ಮಾವಿನಹೊಳೆ, ಅಳ್ಳಂಕಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಈ ಗ್ರಾಮಗಳ 169ಕ್ಕೂ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇತ್ತ ಮಳೆ ಕೂಡ ಹೆಚ್ಚಾಗಿರುವುದರಿಂದ ಶರಾವತಿ ನದಿ ಉಕ್ಕಿ ಹರಿಯುತ್ತಿದೆ. ಇಂದೂ ಕೂಡ ಜಲಾಶಯದಿಂದ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಹೀಗಾಗಿ, ಇನ್ನಷ್ಟು ಗ್ರಾಮಗಳಿಗೆ ಪ್ರವಾಹದ ಭೀತಿ ಶುರುವಾಗಿದೆ.
ಸೂಪಾ ಅಣೆಕಟ್ಟೆ ನೀರಿನ ಮಟ್ಟ ಏರಿಕೆ: ಇನ್ನೊಂದೆಡೆ, ಜಿಲ್ಲೆಯ ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದೆ. ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟವು ಆ. 3ರ ಬೆಳಗ್ಗೆ 8 ಗಂಟೆ ವೇಳೆಗೆ 5556.47 ಮೀಟರ್ಗೆ ಏರಿದೆ. ಗರಿಷ್ಠ 564 ಮೀ. ಎತ್ತರ ಇರುವ ಜಲಾಶಯದ ಒಳಹರಿವು ಸುಮಾರು 44,617 ಕ್ಯೂಸೆಕ್ ಇದೆ. ಇದೇ ರೀತಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದಲ್ಲಿ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು.
ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು. ಹಾಗೂ ಸೂಪಾ ಅಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ, ಜಲಸಾಹಸ ಕ್ರೀಡೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸಬಾರದು ಎಂದು ಸೂಪಾ ಅಣೆಕಟ್ಟೆ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.