ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಮೀನುಗಾರಿಕೆ ಮಾಡಲು ಹೋಗಿ ಮೀನಿಗೆ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಕೃಷ್ಣಾ ನದಿಯಲ್ಲಿ ಹಲ್ಯಾಳ ಗ್ರಾಮದ ಮಹಾಂತೇಶ ದುರ್ಗಪ್ಪ ಕರಕರಮುಂಡಿ (38) ಸಾವನ್ನಪ್ಪಿದ್ದಾರೆ.
ಬೆಳಗ್ಗೆ ನದಿಯಲ್ಲಿ ಮೀನುಗಾರಿಕೆಗೆ ಬಲೆ ಹಾಕಿದ್ದ ಮಹಾಂತೇಶ ಬಳಿಕ ನೀರಿಗಿಳಿದಿದ್ದ. ಈ ವೇಳೆ ಕಾಲಿಗೆ ಬಲೆ ಸುತ್ತಿ ಹೊರ ಬರಲಾಗದೇ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಹಿಂದೆಯೂ ಮಹಾಂತೇಶ ತಂದೆ ದುರ್ಗಪ್ಪ ಕರಕರಮುಂಡಿ ಅವರು ಇದೇ ರೀತಿಯಲ್ಲಿ ಕಾಲಿಗೆ ಬಲೆ ಸುತ್ತಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಕಾರವಾರ: ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದ ತಾಯಿ, ಮಗಳು ಸಾವು - Mother Daughter Death