ಹುಬ್ಬಳ್ಳಿ: ನಗರದಲ್ಲಿ ಯುವಕನೋರ್ವನ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಸುದೀಪ್, ಕಿರಣ್ ಕೊಲೆ ಆರೋಪಿಗಳು.
ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಶಿವರಾಜ್ ಕಮ್ಮಾರ ಎಂಬ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಹತ್ಯೆ ನಡೆದ 6 ಗಂಟೆಯಲ್ಲಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕೊಲೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ತೋರಿಸಲು ಬಂಧಿಸಿದ್ದ ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ಧಾರೆ. ಕೂಡಲೇ ಆರೋಪಿಗಳಾದ ಸುದೀಪ್ ಮತ್ತು ಕಿರಣ್ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಗುಂಡು ತಗುಲಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾಹಿತಿ ನೀಡಿದ್ದಾರೆ. "ನಿನ್ನೆ ರಾತ್ರಿ ಹುಬ್ಬಳ್ಳಿಯ ಗೋಪನಕೊಪ್ಪ ಜಂಕ್ಷನ್ನಲ್ಲಿ ಶಿವರಾಜ್ ಎಂಬ ಯುವಕನ ಕೊಲೆ ಪ್ರಕರಣದ ಇಬ್ಬರು ಕೊಲೆ ಆರೋಪಿಗಳು ವಶಕ್ಕೆ ಪಡೆಯಲಾಗಿತ್ತು. ಇಬ್ಬರು ಆರೋಪಿತರು ಇನ್ನುಳಿದವರ ಪತ್ತೆಗೆ ಸಹಕರಿಸುವುದಾಗಿ ಹೇಳಿದ್ದರು. ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಹೋದಾಗ, ಕಿರಣ್ ಮತ್ತು ಸುದೀಪ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ".
"ಈ ವೇಳೆ ನಮ್ಮ ಹಳೆ ಹುಬ್ಬಳ್ಳಿ ಪೊಲೀಸರು ಸ್ವಯಂ ರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆ ವೇಳೆ ನಮ್ಮ ಪೊಲೀಸ್ ಸಿಬ್ಬಂದಿಗಳಿಗೂ ಗಾಯಗಳಾಗಿವೆ. ಎಲ್ಲರನ್ನೂ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಲೆಯಲ್ಲಿ ನಾಲ್ಕು ಜನ ಭಾಗಿಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆ ಮಾಡುತ್ತೇವೆ. ಕೊಲೆಗೆ ಹಳೆ ವೈಷಮ್ಯ ಕಾರಣ ಎಂಬ ಮಾಹಿತಿ ಇದೆ. ಆದರೆ ತನಿಖೆಯ ಬಳಿಕ ನಿಖರ ಕಾರಣ ತಿಳಿಯಲಿದೆ" ಎಂದು ಮಾಹಿತಿ ನೀಡಿದರು.
ಇನ್ನು ಮೃತ ಶಿವರಾಜ್ ಕಮ್ಮಾರ ತಾಯಿ ಲಕ್ಷ್ಮಿ, "ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ. "ನನ್ನ ಮಗ ಮನೆಗೆ ಆಧಾರ ಸ್ತಂಭವಾಗಿದ್ದ. ಆದರೆ ಆತನ ಸ್ನೇಹಿತರೇ ನನ್ನ ಮಗನನ್ನು ಕೊಲೆಮಾಡಿದ್ದಾರೆ. ಅವರನ್ನು ಅದೇ ರೀತಿ ಶಿಕ್ಷೆಯಾಗಬೇಕು. ಎಷ್ಟು ದುಡ್ಡು ಕೊಟ್ಟರು ನನ್ನ ಮಗ ಬರುವುದಿಲ್ಲ" ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಧಾರವಾಡ: ಹನಿಟ್ರ್ಯಾಪ್ ಮಾಡುತ್ತಿದ್ದ ನಾಲ್ವರು ಸೆರೆ, ಚಿನ್ನಾಭರಣ ವಶಕ್ಕೆ