ಬೆಂಗಳೂರು: ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಿದ ವಿಚಾರಕ್ಕೆ ಆ್ಯಂಬುಲೆನ್ಸ್ ಚಾಲಕರು ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ಟೋಬರ್ 15ರಂದು ಪೀಣ್ಯದ ಎಸ್ಆರ್ಎಸ್ ಚಿತಾಗಾರದ ಬಳಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ಖಾಸಗಿ ಆ್ಯಂಬುಲೆನ್ಸ್ ಸರ್ವಿಸ್ ಚಾಲಕ ಶಿವರಾಜು ಹಾಗೂ ಶ್ರೀಕಾಂತ್ ನೀಡಿರುವ ದೂರಿನ ಅನ್ವಯ ಮಹದೇವಮ್ಮ ಹಾಗೂ ಆಟೋ ಮಂಜು ಎಂಬಾತನ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ: ಆ್ಯಂಬುಲೆನ್ಸ್ ಚಾಲಕರಾದ ಶಿವರಾಜು ಹಾಗೂ ಶ್ರೀಕಾಂತ್ ಅಕ್ಟೋಬರ್ 15ರಂದು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಿಂದ ಮೃತದೇಹವೊಂದನ್ನು ಪೀಣ್ಯದ ಎಸ್ಆರ್ಎಸ್ ಚಿತಾಗಾರಕ್ಕೆ ತಂದಿದ್ದಾರೆ. ಆದರೆ, ಸ್ವತಃ ತಾವೇ ಆ್ಯಂಬುಲೆನ್ಸ್ ಸರ್ವೀಸ್ ಕೂಡ ಹೊಂದಿರುವ ಚಿತಾಗಾರದ ಮೇಲ್ವಿಚಾರಕಿ ಮಹದೇವಮ್ಮ ಈ ಬಗ್ಗೆ ಗಲಾಟೆ ಮಾಡಿದ್ದಾರೆ. 'ನಮಗೆ ಬಂದಿರುವ ಬಾಡಿಗೆಯನ್ನು ನೀವು ತೆಗೆದುಕೊಂಡಿದ್ದು ಯಾಕೆ?, ನಾವು ಇಲ್ಲಿಯ ಲೋಕಲ್, ನಮ್ಮನ್ನು ಎದುರು ಹಾಕಿಕೊಂಡರೆ ಸರಿ ಇರಲ್ಲ' ಎಂದು ಎಂದು ಬ್ಲೇಡ್ ಫ್ರೇಮ್ನಿಂದ ಹಲ್ಲೆ ಮಾಡಿದ್ದಾರೆ. ಹಾಗೂ ಮೃತದೇಹದ ಅಂತ್ಯಸಂಸ್ಕಾರಕ್ಕೆ 5 ಸಾವಿರ ರೂ. ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ದೂರು ನೀಡಲಾಗಿದೆ.
ಶಿವರಾಜು ಹಾಗೂ ಶ್ರೀಕಾಂತ್ ನೀಡಿರುವ ದೂರಿನ ಅನ್ವಯ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹಾವೇರಿ ಬಾಲಕನ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು