ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಆಧರಿಸಿ ಸಿಐಡಿ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
'2021ರಲ್ಲಿ ಕೆಲಸವೊಂದರ ನಿಮಿತ್ತ ಪ್ರಜ್ವಲ್ ರೇವಣ್ಣ ಅವರನ್ನ ಭೇಟಿಯಾಗಲು ತೆರಳಿದ್ದಾಗ ಅವರ ಕ್ವಾರ್ಟ್ಸ್ನಲ್ಲಿ ಬೆದರಿಸಿ ತಮ್ಮ ಮೇಲೆ ಬಲಾತ್ಕಾರ ಮಾಡಿದ್ದು, ಅದನ್ನು ವಿಡಿಯೋ ಮಾಡಿಕೊಂಡು ಈ ವಿಚಾರ ಬಾಯಿಬಿಟ್ಟರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು' ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಜೊತೆಗೆ 'ಗನ್ ತೋರಿಸಿ ನನ್ನ ಮತ್ತು ನನ್ನ ಗಂಡನ ಮುಗಿಸುವುದಾಗಿ ಹೆದರಿಸಿ, ನನ್ನ ಮೇಲೆ ಅನೇಕ ಬಾರಿ ದೌರ್ಜನ್ಯ ಎಸಗಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಐಪಿಸಿ ಸೆಕ್ಷನ್ 376(2)N - ಮಹಿಳೆ ಮೇಲೆ ಬೆದರಿಸಿ ನಿರಂತರ ಅತ್ಯಾಚಾರ, 506- ಅಪರಾಧಿಕ ಉದ್ದೇಶದಿಂದ ಬೆದರಿಸುವುದು, 354a1 - ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು, 354b ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡುವುದು, 354c ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಖಾಸಗಿ ವಿಷಯಗಳನ್ನ ಸೆರೆ ಹಿಡಿಯುವುದು/ನೋಡುವುದು, ಹಾಗೂ ಐಟಿ ಕಾಯ್ದೆಯಡಿ ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಹಾಸನ ಪೆನ್ ಡ್ರೈವ್ ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಸುತ್ತಿರುವ ಎಸ್ಐಟಿ ಇದೀಗ ಮತ್ತೊಂದು ಎಫ್ಐಆರ್ ದಾಖಲಾದ ಬೆನ್ನಲ್ಲೇ ತನಿಖೆ ಮತ್ತಷ್ಟು ಚುರುಕುಗೊಳಿಸಿದೆ. ವಿದೇಶಕ್ಕೆ ತೆರಳಿರುವ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: 'ಸತ್ಯ ಆದಷ್ಟು ಬೇಗ ಹೊರಬರಲಿದೆ': ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೇಳಿದ ಪ್ರಜ್ವಲ್ ರೇವಣ್ಣ - Prajwal Revanna