ಬೆಂಗಳೂರು: ಯುವಕನೋರ್ವ ಯುವತಿಗೆ ಮತ್ತೇರಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬೆದರಿಸಿ ನಿರಂತರವಾಗಿ ಲೈಂಗಿಕ ಶೋಷಣೆ, ಜಾತಿನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. 26 ವರ್ಷದ ಯುವತಿ ನೀಡಿರುವ ದೂರಿನ ಅನ್ವಯ ಆಂಧ್ರಪ್ರದೇಶ ಮೂಲದ ಅಕ್ಕಿ ಲಕ್ಷ್ಮೀರೆಡ್ಡಿ ಎಂಬಾತನ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನ ಸಾರಾಂಶ: ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಯುವತಿ, 2019ರಲ್ಲಿ ಆರ್.ಟಿ. ನಗರದ ಖಾಸಗಿ ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಯುವತಿ ಬಳಿ ಕ್ರೆಡಿಟ್ ಕಾರ್ಡ್ ಪಡೆಯಲು ಬಂದಿದ್ದ ಆಂಧ್ರಪ್ರದೇಶ ಮೂಲದ ಆರೋಪಿ ಲಕ್ಷ್ಮೀರೆಡ್ಡಿಯ ಪರಿಚಯವಾಗಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ತನ್ನ ಸಹೋದರಿಯ ಬರ್ತ್ ಡೇ ಕಾರ್ಯಕ್ರಮವಿದೆ ಎಂದು ಯುವತಿಯನ್ನು ಆರ್.ಟಿ. ನಗರದ ರೆಸಿಡೆನ್ಸಿಯೊಂದಕ್ಕೆ ಆಹ್ವಾನಿಸಿದ್ದ ಆರೋಪಿ, ಟೀಯಲ್ಲಿ ಮತ್ತು ಬರುವ ಔಷಧಿ ಬೆರೆಸಿ, ಕುಡಿಸಿ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ, ಕೃತ್ಯದ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಆರೋಪಿ, ನಂತರದ ದಿನಗಳಲ್ಲಿ ತನಗೆ ಬೆದರಿಸಿ ನಿರಂತರವಾಗಿ ಲೈಂಗಿಕ ಶೋಷಣೆಗೈದಿದ್ದಾನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.
ಅಲ್ಲದೆ, ತನ್ನ ಜಾತಿ ಹಾಗೂ ತಾಯಿಯ ಕುರಿತು ಕೀಳು ಭಾಷೆಯಲ್ಲಿ ನಿಂದಿಸಿರುವ ಆರೋಪಿ, ನಮ್ಮ ಮನೆಯಲ್ಲಿದ್ದ ಅಂಬೇಡ್ಕರ್ ಅವರ ಫೋಟೋ ತೆಗೆದುಹಾಕುವಂತೆ ಕಿರುಕುಳ ನೀಡಿದ್ದಾನೆ. ಇಷ್ಟಾದ ಬಳಿಕವೂ ನವೆಂಬರ್‌ನಲ್ಲಿ ತನ್ನನ್ನು ಖಾಸಗಿ ಹೋಟೆಲ್‌ಗೆ ಕರೆದೊಯ್ದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿದ್ದಾರೆ.
ಯುವಕನಿಂದ ಬೆದರಿಕೆ ಆರೋಪ: ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಡೆದ ವಿಚಾರವನ್ನು ಯುವತಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ನವೆಂಬರ್ 30ರಂದು ತನ್ನನ್ನು ಭೇಟಿಯಾಗಿದ್ದ ಆರೋಪಿ, ಆಕೆಯ ಮೊಬೈಲ್ ವಾಲ್‌ಪೇಪರ್‌ನಲ್ಲಿದ್ದ ಅಂಬೇಡ್ಕರ್ ಅವರ ಫೋಟೋ ತೆಗೆದುಹಾಕುವಂತೆ ಬೆದರಿಸಿ ಮೊಬೈಲ್ ಒಡೆದುಹಾಕಿದ್ದಾನೆ. ಅಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಆಕೆಯ ಬಟ್ಟೆ ಹರಿದುಹಾಕಿ, ''ನಾನು ರಾಯಲಸೀಮೆಯವನು, ನಾವು ಬಾಂಬ್ ತಯಾರಿಸುವವರು. ಎದುರಾಡಿದರೆ ನಿಮ್ಮ ಮನೆಯ ಮೇಲೆ ಬಾಂಬ್ ತಂದು ಹಾಕಿ ನಿಮ್ಮವರನ್ನೆಲ್ಲಾ ಸಾಯಿಸುತ್ತೇನೆ'' ಎಂದು ಬೆದರಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಸಂತ್ರಸ್ತ ಯುವತಿ ನೀಡಿರುವ ದೂರಿನ ಅನ್ವಯ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ದೂರು ನೀಡುತ್ತಿದ್ದಂತೆ ಆರೋಪಿ ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಪ್ರಕರಣದ ತನಿಖೆಯನ್ನು ಜೆ.ಸಿ.ನಗರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ನಡೆಸುವಂತೆ ಆದೇಶಿಸಲಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಇದನ್ನೂ ಓದಿ: ಬಾಡಿಗೆದಾರ ಯುವತಿಯೊಂದಿಗೆ ಅಸಭ್ಯ ವರ್ತನೆ ಆರೋಪ: ಅಪಾರ್ಟ್‌ಮೆಂಟ್ ಮಾಲೀಕರ ಮಗನ ವಿರುದ್ಧ ಎಫ್ಐಆರ್