ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಪೋಸ್ಟ್ ಮಾಡಲಾಗಿದ್ದ ರಾಜ್ಯ ಬಿಜೆಪಿ ಅಧಿಕೃತ ಎಕ್ಸ್ ಪೇಜ್ ಖಾತೆ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯ ಚುನಾವಣಾ ಅಧಿಕಾರಿಗಳು ನೀಡಿದ ಆಧಾರದ ಮೇರೆಗೆ ಮಲ್ಲೇಶ್ವರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ದೇಶದ ಸಂಪತ್ತನ್ನು ಸಮನಾಗಿ ಹಂಚಿಕೆ ಮಾಡುವುದಾಗಿ ಘೋಷಿಸಿತ್ತು. ಪ್ರಣಾಳಿಕೆಯಲ್ಲಿರುವ ಈ ಅಂಶ ಕುರಿತಂತೆ ಪರ-ವಿರೋಧಗಳು ವ್ಯಕ್ತವಾಗಿದ್ದವು. ಬಿಜೆಪಿ ಕೂಡ ಈ ಬಗ್ಗೆ ಟೀಕೆ ಮಾಡಿತ್ತು.
'ಕಾಂಗ್ರೆಸ್ ಪ್ರಣಾಳಿಕೆ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆ' ಎಂಬ ಶೀರ್ಷಿಕೆಯಡಿ ಏಪ್ರಿಲ್ 23 ರಂದು ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಪೋಸ್ಟ್ ಮಾಡಿರುವ ಬಗ್ಗೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡವು ಎಫ್‌ಐಆರ್ ದಾಖಲಿಸಿದೆ. ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವುದು ಮತ್ತು ಸ್ವಾಸ್ಥ್ಯ ಕೆಡಿಸಲು ಯತ್ನಿಸಿರುವ ಆರೋಪದ ಮೇಲೆ ಆರ್ಪಿ ಆ್ಯಕ್ಟ್ 125 ಹಾಗೂ ಐಪಿಸಿ 153 ಅಡಿ ಪ್ರಕರಣ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.