ದಾವಣಗೆರೆ: ರಾಜ್ಯ ಸರ್ಕಾರವನ್ನು ಕೆಡವಲು ಒಂದು ಸಾವಿರ ಕೋಟಿ ರೂಪಾಯಿಯನ್ನು ಪಕ್ಷದ ಕೆಲ ನಾಯಕರು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೀಡಿರುವ ದೂರಿನ ಅನ್ವಯ ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಸ್.ಮನೋಹರ್ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಪ್ರಕರಣವನ್ನು ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಸೆ.29ರಂದು ದಾವಣಗೆರೆಯ ಜಿಎಂಐಟಿಯಲ್ಲಿ ಬಿಜೆಪಿಯ ಅತೃಪ್ತ ನಾಯಕರ ಸಭೆ ಬಳಿಕ 'ರಾಜ್ಯ ಸರ್ಕಾರವನ್ನು ಕೆಡವಲು ಒಂದು ಸಾವಿರ ಕೋಟಿ ರೂಪಾಯಿಯನ್ನು ಪಕ್ಷದ ಕೆಲ ಮುಖಂಡರು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ' ಎಂದು ಶಾಸಕ ಯತ್ನಾಳ್ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ನಾಯಕರಿಗೆ ಸದ್ಯ ಅಧಿಕಾರವಿಲ್ಲದೇ ಹತಾಶರಾಗಿ, ರಾಜ್ಯ ಸರ್ಕಾರವನ್ನು ಕೆಡವಲು ಸಂಚು ಮಾಡಿದ್ದಾರೆ. ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆಗಿರುವ ಸಂದೇಹವಿದೆ. ಈ ಹಿನ್ನೆಲೆಯಲ್ಲಿ 2024ರ ಡಿಸೆಂಬರ್ ತಿಂಗಳಿನಲ್ಲಿ ರಾಜಕೀಯ ಕ್ರಾಂತಿ ಉಂಟಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಎಸ್.ಮನೋಹರ್ ತಿಳಿಸಿದ್ದಾರೆ.
ಸಾವಿರ ಕೋಟಿ ರೂಪಾಯಿ ಹಣ ಸಂಗ್ರಹಿಸಿ ಇಟ್ಟುಕೊಂಡಿರುವವರು ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ, 'ನೀವೇ ಊಹೆ ಮಾಡಿ' ಎಂದು ಯತ್ನಾಳ್ ಉತ್ತರ ನೀಡಿದ್ದಾರೆ. ಅಲ್ಲದೇ, ಹಣ ಸಂಗ್ರಹಿಸಿರುವ ನಾಯಕರ ಮನೆಯಲ್ಲಿ, ನೋಟು ಎಣಿಸುವ ಮಷಿನ್ ಪತ್ತೆಯಾಗಿತ್ತು ಎಂದು ಸಹ ಹೇಳಿದ್ದಾರೆ. ಸಭೆಯ ನಂತರ ಇಂತಹ ಹೇಳಿಕೆಯನ್ನು ಯತ್ನಾಳ್ ನೀಡಿದ್ದು, ಈ ವಿಚಾರವಾಗಿ ಸಭೆಯಲ್ಲಿ ಇದ್ದಂತಹ ಎಲ್ಲ ನಾಯಕರುಗಳಿಗೂ ಗೊತ್ತಿದೆ. ಹೀಗಾಗಿ, ಚರ್ಚೆ ಮಾಡಿಯೇ ಮಾಧ್ಯಮಗಳಿಗೆ ತಿಳಿಸಲು ಸಹಮತ ವ್ಯಕ್ತವಾಗಿರುವುದು ಕಾಣುತ್ತಿದೆ ಎಂದು ಎಸ್.ಮನೋಹರ್ ದೂರಿದ್ದಾರೆ.
ಒಂದು ಕಡೆ ಜನಾದೇಶಕ್ಕೆ ಅಪಚಾರ, ಮತ್ತೊಂದು ಕಡೆ ಭ್ರಷ್ಟ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ. ಈ ರೀತಿ ಪಕ್ಷ-ಪಕ್ಷಗಳ ಕಾರ್ಯಕರ್ತರುಗಳ ನಡುವೆ ಗಲಭೆಗಳು ಉಂಟಾಗುವಂತೆ ಮಾಡುವ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ.
ಇದನ್ನೂ ಓದಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್