ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಪಡೆಯಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿ 19 ಮಂದಿ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಡಿಎ ವಿಚಕ್ಷಣ ದಳದ ಡಿವೈಎಸ್ಪಿ ಮಲ್ಲೇಶ್ ಅವರು ನೀಡಿದ ದೂರಿನ ಮೇರೆಗೆ ಚಲ್ಲಘಟ್ಟ ನಿವಾಸಿ ಪುಟ್ಟಮ್ಮ, ಗಂಗಮ್ಮ, ನಾಗರಾಜ್, ಲಕ್ಷ್ಮಮ್ಮ, ಶ್ರೀನಿವಾಸ, ಸಂತೋಷ್, ರವಿಕುಮಾರ್, ಭರತ್, ಸುನೀತ್, ಆಶಾ, ಸ್ವಾಮಿ, ಉಮೇಶ್, ಬಿಡಿಎ ಭೂಸ್ವಾಧೀನ ಅಧಿಕಾರಿ, ವಿಶೇಷ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶೇಷಾದ್ರಿಪುರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಚಲ್ಲಘಟ್ಟ ಸರ್ವೇ ನಂ 13 ಮತ್ತು ಹೊಸ ಸರ್ವೇ ನಂಬರ್ 58ರಲ್ಲಿನ 6 ಎಕರೆ ಜಮೀನಿಗೆ ಸಂಬಂಧಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಎಲ್ಲ ಆರೋಪಿಗಳು ಹಾಗೂ ಜಮೀನಿನ ಮೂಲ ಮಾಲೀಕ ಮೂಡ್ಲಪ್ಪ ಯಾವುದೇ ರೀತಿಯಲ್ಲಿ ಸಂಬಂಧಿಗಳಲ್ಲ. ಆದರೂ ಸಂಬಂಧಿಕರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಿಡಿಎಗೆ ಸಲ್ಲಿಸಿದ್ದಾರೆ. ಅಲ್ಲದೆ, ಈ ಆಸ್ತಿಯ ಮಾಲೀಕರುಗಳು ತಾವುಗಳೇ ಎಂದು ಹೇಳಿಕೊಂಡು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದಾರೆ ಎಂದು ಡಿವೈಎಸ್ಪಿ ದೂರಿನಲ್ಲಿ ತಿಳಿಸಲಾಗಿದೆ.
ಈ ಆಸ್ತಿಯನ್ನು ಪರಿಶೀಲಿಸಿ ವರದಿ ನೀಡಲು ನೇಮಕವಾಗಿದ್ದ ಬಿಡಿಎನ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಸುಧಾ, ಸರ್ವೇಯರ್ ಪಿ.ಎನ್.ರವಿಪ್ರಕಾಶ್ ಈ ಆಸ್ತಿಯ ಬಳಿಗೆ ಹೋಗಿ ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡದೆ, ಆಸ್ತಿಗೆ ಸಂಬಂಧವಿಲ್ಲದ ವ್ಯಕ್ತಿ ಉಮೇಶ್ ಎಂಬುವರು ತೋರಿಸಿದ ಮೇರೆಗೆ ಪರಿಶೀಲನೆ ಮಾಡಿ ವರದಿ ಸಿದ್ಧಪಡಿಸಿ, ಬಿಡಿಎಗೆ ತಪ್ಪು ಮಾಹಿತಿ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಜೊತೆಗೆ ಈಗಾಗಲೇ ರೆವಿನ್ಯೂ ಸೈಟ್‌ಗಳಾಗಿ ಮಾರ್ಪಾಡಾಗಿದ್ದರೂ, ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಜಮೀನಾಗಿದ್ದರೂ ಸರ್ವೇಯರ್ ರವಿಪ್ರಕಾಶ್ ಮತ್ತು ಡಾ.ಸುಧಾ ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ತಯಾರಿಸಿದ್ದಾರೆ. ಆರೋಪಿಗಳು ಸಲ್ಲಿಸಿದ್ದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ನಿಜವಾದ ಆಸ್ತಿ ಮಾಲೀಕರ ಬಗ್ಗೆ ವಿಚಾರ ಮಾಡದೆ ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿ ಡಾ ಶಿವಣ್ಣ, ಜ.19, 2021ರಲ್ಲಿ ಪುಟ್ಟಮ್ಮ ಹೆಸರಿಗೆ ಖಾತೆ ಮಾಡಲು ಬೆಂಗಳೂರು ದಕ್ಷಿಣ ತಾಲೂಕು ವಿಶೇಷ ತಹಶೀಲ್ದಾರ್‌ಗೆ ಆದೇಶ ಮಾಡಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಡಿವೈಎಸ್ಪಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಗೋವಿಂದರಾಜು ಎಂಬವರು ಬಿಡಿಎಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಾಥಮಿಕ ವಿಚಾರಣೆ ಹಾಗೂ ಬೆರಳು ಮುದ್ರೆ ತಜ್ಞರಿಂದ ಪಡೆದಿರುವ ವರದಿಗಳಿಂದ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.
ಆಸ್ತಿಯ ಮೂಲ ಮಾಲೀಕ ಮೂಡ್ಲಪ್ಪ ಅಲಿಯಾಸ್ ಮೂಡ್ಲಯ್ಯ 1976ರಲ್ಲಿ ನಿಧನರಾಗಿದ್ದಾರೆ. 1992 ಆಸ್ತಿಯ ಪೋಡಿ ಆಗಿದೆ. 2019-2020ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಆರೋಪಿಗಳು ರಿಲೀಸ್ ಡೀಡ್ ಮಾಡಿಕೊಂಡಿದ್ದಾರೆ. ಪುಟ್ಟಮ್ಮ ಹೆಸರಿಗೆ 57,498 ಚದರ ಅಡಿಗಳಿಗೆ ಭೂ ಪರಿಹಾರ ಮಂಜೂರಾತಿಗೆ ದಾಖಲೆಗಳ ಸಲ್ಲಿಕೆಯಾಗಿರುತ್ತದೆ. ಆದರೆ, ಪರಿಹಾರ ಬಿಡುಗಡೆ ಆಗಿಲ್ಲ. ಹೀಗಾಗಿ, ವಂಚನೆ ಮಾಡಿದ ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿ ಮಲ್ಲೇಶ್ ದೂರಿನಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ - Darshan Bail Plea Hearing