ಬೆಂಗಳೂರು: ವಾಹನ ಚಾಲಕರು ಹಾಗೂ ಗ್ರೂಪ್ ಡಿ ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ವಿಧಾನ ಪರಿಷತ್ ಸಚಿವಾಲಯ ಹೊರಡಿಸಿರುವ ಅಧಿಸೂಚನೆಗಳನ್ನು ಹಿಂಪಡೆಯುವಂತೆ ಆರ್ಥಿಕ ಇಲಾಖೆ ನಿರ್ದೇಶನ ನೀಡಿದೆ.
ಮಾರ್ಚ್ 4 ಹಾಗೂ ಮಾ.12ರಂದು ವಿಧಾನಪರಿಷತ್ ಸಚಿವಾಲಯವು ವಾಹನ ಚಾಲಕರು ಹಾಗೂ ಗ್ರೂಪ್ ಡಿ ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಅಧಿಸೂಚನೆಗಳನ್ನು ಹೊರಡಿಸಿತ್ತು. ಅಧಿಸೂಚನೆಗಳಲ್ಲಿ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಧಿಸೂಚನೆಗಳಲ್ಲಿ ನಮೂದಿಸಿರುವ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಅನುಮತಿ ಕೋರಲಾಗಿದ್ದು, ಪ್ರಸ್ತಾವನೆಯು ಇನ್ನೂ ಆರ್ಥಿಕ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇದುವರೆಗೂ ಸಹಮತಿಸಿಲ್ಲ. ಆದಾಗ್ಯೂ, ಸಚಿವಾಲಯದಿಂದ ಈ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಗಳನ್ನು ಹೊರಡಿಸಲಾಗಿದೆ.
ಈ ಸಂಬಂಧ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯು ವಿಧಾನ ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯಲ್ಲಿ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಇನ್ನೂ ಮುಂದೆ ಖಾಲಿಯಾಗುವ ಹುದ್ದೆಗಳನ್ನು ಬಾಹ್ಯ ಮೂಲಗಳ ಮುಖಾಂತರ ಪೂರೈಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಜೊತೆಗೆ ಸುತ್ತೋಲೆಯಲ್ಲಿನ ಸೂಚನೆಗಳನ್ನು ಎಲ್ಲಾ ಆಡಳಿತ ಇಲಾಖೆಗಳು ಪಾಲಿಸುತ್ತಿವೆ ಎಂದಿದೆ.
2024ರ ಮಾರ್ಚ್ 4 ಮತ್ತು 12ರಂದು ವಿಧಾನ ಪರಿಷತ್ ಸಚಿವಾಲಯದಿಂದ ಹೊರಡಿಸಿರುವ ಅಧಿಸೂಚನೆಗಳನ್ನು ಪೂರ್ವನಿದರ್ಶನವೆಂದು ಪರಿಗಣಿಸಿ, ಎಲ್ಲಾ ಆಡಳಿತ ಇಲಾಖೆಗಳು ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ವಹಿಸುವ ಸಾಧ್ಯತೆಗಳಿದೆ. Transaction of Business Rules, 1977ರಡಿ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಲು, ಆರ್ಥಿಕ ಇಲಾಖೆಯ ಸಹಮತಿ ಕಡ್ಡಾಯ. ಹೀಗಾಗಿ ತಮ್ಮ ಸಚಿವಾಲಯದಿಂದ ಹೊರಡಿಸಿರುವ ಮೇಲಿನ ಎರಡೂ ಅಧಿಸೂಚನೆಗಳನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ: ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ - Motor Vehicle Inspector job