ಹುಬ್ಬಳ್ಳಿ: ಅಕ್ಕನ ಸಾವಿನ ನೋವಿಗೆ ಬೇಸತ್ತು ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ವೀರಾಪೂರ ಓಣಿಯಲ್ಲಿ ನಡೆದಿದೆ. ಅಂಜಲಿಯವರ ಕಿರಿಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ಕಿಮ್ಸ್ಗೆ ದಾಖಲು ಮಾಡಿದ್ದಾರೆ. ಬಾಲಕಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಚೆನ್ನಮ್ಮ ವೃತ್ತದ ಪ್ರತಿಭಟನೆ ವೇಳೆಯೂ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಗ ಸ್ವಾಮೀಜಿಗಳು ನೀರು ಕುಡಿಸಿ ಸಾಂತ್ವನ ಹೇಳಿದ್ದರು. ಅದಾದ ನಂತರ ಮನೆಗೆ ತೆರಳಿದ ಮೇಲೆ ಆತ್ನಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ: ಘಟನೆ ಬಗ್ಗೆ ಮಾತನಾಡಿರುವ ಅಂಜಲಿ ಅಜ್ಜಿ ಗಂಗಮ್ಮ, ''ಹತ್ಯೆಗೈದ ಆರೋಪಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಮನನೊಂದ ನನ್ನ ಮೊಮ್ಮಗಳು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಎಲ್ಲರೂ ಅಂಜಲಿ ಸಾವಿಗೆ ನ್ಯಾಯ ದೊರೆಯಬೇಕೆಂದು ನಮ್ಮ ಬೆನ್ನಿಗೆ ನಿಂತಿದ್ದಾರೆ. ಆದರೆ ಆರೋಪಿಗೆ ಚಿಕಿತ್ಸೆ ನೀಡುತ್ತಿರುವುದು ವಿಷಾದನೀಯ. ಚಿಕಿತ್ಸೆ ನೀಡುವ ಬದಲು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ನನ್ನ ಮೊಮ್ಮಗಳು ಇದೀಗ ಕ್ಷೇಮವಾಗಿದ್ದು, ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ'' ಎಂದರು.
''ಯಶೋಧಾ ಕರೆ ಮಾಡಿ ಮಾತನಾಡಿದ್ದು, ನಾನು ಕ್ಷೇಮವಾಗಿದ್ದೇನೆ. ನೀವೇನು ಚಿಂತೆಗೆ ಈಡಾಗಬೇಡಿ, ನನ್ನನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿ ಎಂದು ಅಶೋಧಾ ತಿಳಿಸಿದ್ದಾಳೆ'' ಎಂದು ಗಂಗಮ್ಮ ತಿಳಿಸಿದರು.