ಬೆಳಗಾವಿ: ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ನೀರುಪಾಲಾಗಿರುವ ದಾರುಣ ಘಟನೆ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಸಂಭವಿಸಿದೆ. ಶೋಧ ಕಾರ್ಯಾಚರಣೆಯಲ್ಲಿ ಮಕ್ಕಳಿಬ್ಬರ ಮೃತದೇಹಗಳನ್ನು ನದಿಯಿಂದ ಮೇಲೆತ್ತಲಾಗಿದೆ.
ಬೆನಕನಹೊಳಿ ಗ್ರಾಮದ ಲಕ್ಷ್ಮಣ ರಾಮಾ ಅಂಬಲಿ (45), ಪುತ್ರರಾದ ರಮೇಶ ಅಂಬಲಿ (15), ಯಲ್ಲಪ್ಪ ಅಂಬಲಿ (13) ನೀರಿನಲ್ಲಿ ಮುಳುಗಿದವರು. ಭಾನುವಾರ ಸಂಜೆ ಮೀನಿನ ಬಲೆ ಹಾಕಲು ನದಿಗೆ ಇಳಿದ ವೇಳೆ ಮೂವರು ನಾಪತ್ತೆಯಾಗಿದ್ದರು. ಸದ್ಯ ಕತ್ತಲಾದ ಕಾರಣ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಮತ್ತೆ ಲಕ್ಷ್ಮಣ ಅಂಬಲಿ ಅವರಿಗಾಗಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆಯಾದರೂ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಲಕ್ಷ್ಮಣ ಅಂಬಲಿ ಕುಟುಂಬಸ್ಥರು ಹುಡುಕಾಡಲು ಶುರು ಮಾಡಿದ್ದರು. ಅಲ್ಲದೇ ಯಮಕನಮರಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಯಮಕನಮರಡಿ ಪೊಲೀಸರು ಪರಿಶೀಲನೆ ಕೈಗೊಂಡಿದ್ದರು. ಅಗ್ನಿಶಾಮಕ ದಳದೊಂದಿಗೆ ಶೋಧ ಕಾರ್ಯ ಆರಂಭಿಸಲಾಗಿತ್ತು. ಮನೆ ಯಜಮಾನ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದರಿಂದ ಸ್ಥಳದಲ್ಲಿ ಕುಟುಂಬಸ್ಥರು ಕಣ್ಣೀರು ಸುರಿಸಿದರು.
ಎಸ್ಪಿ ಪ್ರತಿಕ್ರಿಯೆ: ಘಟನೆ ಬಗ್ಗೆ ಮಾಹಿತಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ''ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಲಕ್ಷ್ಮಣ ಅಂಬಲಿ ನಿನ್ನೆ ರಾತ್ರಿ ಘಟಪ್ರಭಾ ನದಿಗೆ ಮೀನು ಹಿಡಿಯಲು ಹೋಗಿದ್ದರು. ಬೆಳಗ್ಗೆಯಾದರೂ ಮೂವರು ಮನೆಗೆ ಮರಳಿ ಬಂದಿರಲಿಲ್ಲ. ಊರಲ್ಲಿ ಜಾತ್ರೆ ಇರುವ ಹಿನ್ನೆಲೆಯಲ್ಲಿ ಮನೆಯವರು ಸುಮ್ಮನಾಗಿದ್ದರು. ಬಳಿಕ ಜಾತ್ರೆಯ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಕುರಿತು ಲಕ್ಷ್ಮಣ ಅವರ ಪತ್ನಿ ಯಮಕನಮರಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ತಕ್ಷಣವೇ ನಮ್ಮ ಪೊಲೀಸರು ಅಗ್ನಿಶಾಮಕದಳದ ತಂಡದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ: ಈಜುಕೊಳದಲ್ಲಿ ಮೂವರು ಯುವತಿಯರ ಸಾವು ಪ್ರಕರಣ: ರೆಸಾರ್ಟ್ ಮಾಲೀಕ, ಮ್ಯಾನೇಜರ್ ಬಂಧನ