ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಹಾಗು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಗೀತಾ ಶಿವರಾಜ್ಕುಮಾರ್ ಅವರಂತಹ ಒಳ್ಳೆಯ ಅಭ್ಯರ್ಥಿಯನ್ನು ನೀಡಿದ್ದಾರೆ. ಇದು ಜಿದ್ದಾಜಿದ್ದಿನ ಚುನಾವಣೆ. ಇಬ್ಬರು ಮಾಜಿ ಸಿಎಂ ಮಕ್ಕಳ ಚುನಾವಣೆ. ನಮ್ಮ ಅಭ್ಯರ್ಥಿ ತಾಲೂಕು ಮಟ್ಟದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಗಿಂತ ಈಗ ಸಾಕಷ್ಟು ಬದಲಾವಣೆಯಾಗಿದೆ ಎಂದು ಗೀತಕ್ಕ ಹೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದರು.
ರಾಘವೇಂದ್ರ, ತಂದೆ ಯಡಿಯೂರಪ್ಪ ಆಸ್ತಿ ಮಾಡಿದ್ದೇ ಸಾಧನೆ: ಈಶ್ವರಪ್ಪನವರು ಕೆಜೆಪಿಗೆ ಹೋಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಶ್ವರಪ್ಪ ಬಿಜೆಪಿಯ ಹಿರಿಯ ಕಟ್ಟಾಳು. ಅವರನ್ನು ಪಕ್ಷದಲ್ಲಿ ನಿರ್ಲಕ್ಷಿಸಲಾಗಿದೆ. ಇದು ನಮ್ಮ ಗೆಲುವಿಗೆ ಸಹಕಾರಿ ಆಗಲಿದೆ. ಬೈಂದೂರಿನಲ್ಲಿ ಈ ಸಲ 75 ಸಾವಿರ ಮತಗಳು ನಮ್ಮ ಪಕ್ಷಕ್ಕೆ ಬರಲಿವೆ. ರಾಘವೇಂದ್ರ ಹಾಗೂ ಅವರ ತಂದೆ ಆಸ್ತಿ ಮಾಡಿದ್ದೇ ದೊಡ್ಡ ಸಾಧನೆ ಎಂದು ಟೀಕಿಸಿದರು.
ಎನ್ ಹೆಚ್ ರಸ್ತೆ ನಿರ್ಮಾಣಕ್ಕೆ 18 ವರ್ಷಗಳು ಬೇಕಾಯಿತೇ? ಎಲ್ಲಿ ನಿಮ್ಮ ಅಚ್ಛೇ ದಿನ್ ಬಂತು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷ ಸಾಕಷ್ಟು ಅಭಿವೃದ್ದಿ ಮಾಡಿದೆ. ಆದರೆ ಬಿಜೆಪಿಯವರು ವಿಮಾನ ನಿಲ್ದಾಣ ಹಾಗೂ ಹೈವೇ ಮಾಡಿ, ಅದರ ಪಕ್ಕದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಶಾಹಿ ಗಾರ್ಮೆಂಟ್ಸ್ಗೆ 258 ಎಕರೆ ಏಕೆ ನೀಡಲಾಗಿದೆ?. ಕಾರ್ಖಾನೆಗೆ 10 ಎಕರೆ ಸಾಕು. ಉಳಿದ ಭೂಮಿಯನ್ನು ತೆರವು ಮಾಡಬೇಕೆಂದು ಆಗ್ರಹಿಸಿದರು.