ಉಡುಪಿ : ಕಾಪುವಿನಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರವೆಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣಕ್ಕೆ ಗುರಿಯಾಗಿದ್ದ ತಂದೆ, ಉಚ್ಚಿಲದ ಭಾಸ್ಕರ ನಗರ ನಿವಾಸಿ ಸೈಯದ್ ಮುಸ್ತಕೀಮ್ ಅಹ್ಮದ್ (39)ನನ್ನು ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ: ಉಚ್ಚಿಲದ ಭಾಸ್ಕರ ನಗರ ನಿವಾಸಿ ಸೈಯದ್ ಮುಸ್ತಕೀಮ್ ಅಹ್ಮದ್ 2019ರ ನ. 30ರಿಂದ ಡಿ. 15ರ ನಡುವಿನ ಅವಧಿಯಲ್ಲಿ ತನ್ನ 7 ಮತ್ತು 14 ವರ್ಷದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವೆಸಗಿದ್ದಾನೆ ಎಂದು ಆತನ ಪತ್ನಿ ನಫೀಸಾ ನುಸ್ರತ್ ಪಡುಬಿದ್ರಿ ಪೊಲೀಸ್ ಠಾಣೆಗೆ 2020ರ ಮಾ. 20ರಂದು ದೂರು ನೀಡಿದ್ದರು. ಈ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಬಗ್ಗೆ ಅಂದಿನ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸೈಯದ್ ಮುಸ್ತಕೀಮ್ ಅಹ್ಮದ್ ಜೈಲು ಸೇರಿದ ಬಳಿಕ ಆತನ ಪತ್ನಿ ನಫೀಸಾ ನಸ್ರುತ್ ಸ್ನೇಹಿತ ರಶೀದ್ ಜತೆ ಗುಪ್ತವಾಗಿ ಮದುವೆಯಾಗಿದ್ದರು ಎನ್ನಲಾಗಿದೆ. 2021ರ ಡಿ.15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ವಿಚಾರ ಕೂಡಾ ಬೆಳಕಿಗೆ ಬಂದಿತ್ತು. ಈ ಬಗ್ಗೆಯೂ ಕಾಪು ಪೊಲೀಸರಿಗೆ ದೂರು ನೀಡಲಾಗಿತ್ತು. ವಿಚಾರಣೆ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆಕೆ ಗಂಡು ಮಗುವಿಗೆ ಜನ್ಮ ನೀಡಿರುವುದನ್ನು ಖಚಿತ ಪಡಿಸಿದ್ದರು. ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ಗಂಡನ ಹೆಸರನ್ನು ಯು. ಎ ರಶೀದ್ ಎಂದು ನಮೂದಿಸಿರುವುದಾಗಿಯೂ ತಿಳಿಸಿದ್ದರು.
ತನಿಖೆ ವೇಳೆ ಆಕೆ ತಾನು ರಶೀದ್‌ನನ್ನು ಮದುವೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಕೈಬರಹದ ಹೇಳಿಕೆ ಕೊಟ್ಟಿದ್ದಳು. ಬಳಿಕ ಕಾಪು ವೃತ್ತ ನಿರೀಕ್ಷಕ ಕೆ. ಸಿ ಪೂವಯ್ಯ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ಉಡುಪಿ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಯನ್ನು ಆರೋಪದಿಂದ ಖುಲಾಸೆಗೊಳಿಸಿದ್ದಾರೆ. ಉಡುಪಿಯ ನ್ಯಾಯವಾದಿಗಳಾದ ಪಾಂಗಾಳ ಹರೀಶ್ ಶೆಟ್ಟಿ ಮತ್ತು ನಮಿತಾ ಕೆ. ಆರೋಪಿಯ ಪರವಾಗಿ ವಾದಿಸಿದ್ದರು.
ಇದನ್ನೂ ಓದಿ : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇಡೀ ಸಮಾಜದ ಮೇಲೆ ನಡೆಯುವ ಅಪರಾಧ ಕೃತ್ಯ: ಹೈಕೋರ್ಟ್