ಹಾವೇರಿ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತೆ ಚರ್ಮ ಗಂಟು ರೋಗ ಕಾಣಿಸಿಕೊಳ್ಳಲಾರಂಭಿಸಿದೆ. ರೈತರು ತಮ್ಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಕೆಲ ರೈತರಂತೂ ಎತ್ತುಗಳ ಮಾರಾಟಕ್ಕೂ ಮುಂದಾಗಿದ್ದಾರೆ.
ರೈತ ಭಾಷಾಸಾಬ್ ಮಾತನಾಡಿ, ಮನೆಯಲ್ಲಿದ್ದ ಎರಡು ಎತ್ತುಗಳಿಗೆ ಚರ್ಮ ಗಂಟು ರೋಗ ಬಂದಿದೆ. ಅವುಗಳನ್ನು ಮಾರುಕಟ್ಟೆಗೆ ತಂದಿದ್ದೇವೆ. ಚರ್ಮ ಗಂಟು ರೋಗ ಬರದಂತೆ ಲಸಿಕೆ ಹಾಕಿಸಿದ್ದೆವು. ಆದರೂ ಸಹ ರೋಗ ಕಾಣಿಸಿಕೊಂಡಿದೆ. ಪಶುವೈದ್ಯರಿಗೆ ತೋರಿಸಿದ್ದೇವೆ, ಅವರು ಔಷಧಿ ಕೊಡುತ್ತಾರೆ, ನಂತರ ಆ ಊರಿಗೆ ಹೋಗಿ, ಈ ಊರಿಗೆ ಹೋಗಿ ಅಂತಾರೆ. ಅದಕ್ಕಾಗಿ ಮಾರಾಟಕ್ಕೆ ತಂದಿದ್ದೇವೆ. ಇಲ್ಲಿ ಜಾನುವಾರುಗಳಿಗೆ ಆ ರೋಗ ಇದೆ, ಈ ರೋಗ ಇದೆ ಎಂದು ಹೇಳಿ 30 ಸಾವಿರ 40 ಸಾವಿರ ರೂ ಕೇಳುತ್ತಾರೆ. ಇವುಗಳನ್ನು ಮಾರಾಟ ಮಾಡಿಯೇ ಹೋಗುತ್ತೇವೆ. ಇಲ್ಲದಿದ್ದರೆ ಬೇರೆ ಎತ್ತುಗಳಿಗೂ ಕಾಯಿಲೆ ಬರುತ್ತೆ ಎಂದರು.
ರೈತ ಮರಿಯಪ್ಪ ಮಾತನಾಡಿ, ಜಾನುವಾರುಗಳಿಗೆ ನೂರಾರು ಕಾಯಿಲೆಗಳಿವೆ. ಹೀಗಾಗಿ ರೈತರು ಮಾರಾಟಕ್ಕೆ ಬಂದಿದ್ದಾರೆ. ವೈದ್ಯರಿಗೆ ಎತ್ತುಗಳ ರೋಗ ಗುಣಪಡಿಸಲು ಸಾಧ್ಯವಾಗುತ್ತಿಲ್ಲ. ಅವರು ಕೊಡುತ್ತಿರುವ ಇಂಜೆಕ್ಷನ್ಗೆ ಎತ್ತುಗಳು ಆರೋಗ್ಯವಾಗುತ್ತಿಲ್ಲ ಎಂದು ಹೇಳಿದರು.
ಚರ್ಮ ಗಂಟುರೋಗದಿಂದ ರೈತರು ಸಾಕಷ್ಟು ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸರ್ಕಾರ ಇದಕ್ಕೆ ಸೂಕ್ತ ಲಸಿಕೆ ಕಂಡುಹಿಡಿಯಬೇಕು. ಚರ್ಮ ಗಂಟು ರೋಗದಿಂದ ಆಕಳುಗಳು ಸರಿಯಾಗಿ ಹಾಲು ನೀಡುತ್ತಿಲ್ಲ. ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಮೇಲೆ ಎದ್ದು ನಿಲ್ಲಲಾಗುತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಹಾವೇರಿ: ಜಾನುವಾರುಗಳಲ್ಲಿ ಚರ್ಮಗಂಟು ರೋಗ- ಪಶು ಇಲಾಖೆ ಉಪನಿರ್ದೇಶಕರು ಹೇಳಿದ್ದೇನು? - LUMPY SKIN DISEASE