ದಾವಣಗೆರೆ : ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆಗಿದೆ. ಮಳೆ ಬಂದಾದ ತಕ್ಷಣ ರೈತರು ವಿವಿಧ ಬೆಳೆ ಬೆಳೆಯಲು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಕೆಲ ರೈತರು ಭೂಮಿ ಹದ ಮಾಡಿಕೊಂಡು ಜೂನ್ 05 ರ ಬಳಿಕ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದರ ಮಧ್ಯೆ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನಿರುವುದು ರೈತರಿಗೆ ಧೈರ್ಯ ತರಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಳೆಯಾಗಿದ್ದು, ಬಿತ್ತನೆ ಮಾಡಲು ರೈತ ವರ್ಗ ಸಿದ್ಧತೆ ನಡೆಸಿದೆ. ಮುಸುಕಿನಜೋಳ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದರಿಂದ ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ ಇದೆ. ಇದರಿಂದ ಕೃಷಿ ಇಲಾಖೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ದಾಸ್ತಾನು ಮಾಡಿದೆ.
ಈ ಬಾರಿ ಜಿಲ್ಲೆಯಲ್ಲಿ 65,847 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಲಾಗಿದೆ. ಜೋಳ 2400 ಹೆಕ್ಟೇರ್, ರಾಗಿ 7295 ಹೆಕ್ಟೇರ್, ಮೆಕ್ಕೆಜೋಳ 1,26,108 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ. ಜೂನ್ ಐದರ ಬಳಿಕ ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ನೆರವೇರಲಿದೆ. ಮಳೆ ಕೇರಳ ತಲುಪಿದ್ದರಿಂದ ಹೆಚ್ಚು ಮಳೆ ಮಧ್ಯ ಕರ್ನಾಟಕ ಭಾಗಕ್ಕೆ ಬರಬೇಕಾದ್ರೆ ಒಂದು ವಾರ ಕಳೆಯಲಿದೆ. ಆದ್ದರಿಂದ ಜೂನ್ 5ರ ನಂತರ ಬಿತ್ತನೆ ಚುರುಕುಗೊಳ್ಳಲಿದೆ.
ಜಿಲ್ಲೆಯಲ್ಲಿ 49,869 ಕ್ವಿಂಟಾಲ್ನಷ್ಟು ರೈತರಿಂದ ಬಿತ್ತನೆ ಬೀಜದ ಬೇಡಿಕೆ ಇದೆ. ಸದ್ಯ ಕೃಷಿ ಇಲಾಖೆ ಬಳಿ 54,052 ಕ್ವಿಂಟಾಲ್ ಲಭ್ಯವಿದೆ. ಇನ್ನು ರಸಗೊಬ್ಬರ ಮುಂಗಾರು ಹಂಗಾಮಿಗೆ 53,238 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇದೆ. ಕೃಷಿ ಇಲಾಖೆ ಬಳಿ ಪ್ರಸ್ತುತ 72,000 ಮೆಟ್ರಿಕ್ ಟನ್ ದಾಸ್ತಾನು ಇದೆ ಎನ್ನುತ್ತವೆ ಕೃಷಿ ಇಲಾಖೆ ದಾಖಲೆ.
ಕೃಷಿ ಇಲಾಖೆ ಜಂಟಿನಿರ್ದೇಶಕ ಶ್ರೀನಿವಾಸ್ ಹೇಳಿದ್ದಿಷ್ಟು : ಸದ್ಯ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೃಷಿ ತಯಾರಿಯನ್ನು ರೈತರು ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,45,000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಇನ್ನು 1,35,000 ಹೆಕ್ಟೇರ್ನಲ್ಲಿ ಮುಸುಕಿನ ಜೋಳ, ಭತ್ತ 4550 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತೆ ಎಂದು ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಕಾಣುತ್ತಿಲ್ಲ. ಇಲ್ಲಿ ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದ್ದು, ಕರ್ನಾಟಕ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮದಿಂದ ಬಿತ್ತನೆ ಬೀಜ ಕೊಡಲಾಗುತ್ತಿದೆ. 1100 ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಂದ ಬಿತ್ತನೆ ಬೀಜ ಕೊಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ರೈತರು ಗೊಬ್ಬರ, ಬಿತ್ತನೆ ಬೀಜ ಭರದಿಂದ ಖರೀದಿ ಮಾಡುತ್ತಿದ್ದಾರೆ. ಕಳೆದ ವರ್ಷ 50 ಕಂಪನಿಗಳು ದಾವಣಗೆರೆಯಲ್ಲಿ ಕಾರ್ಯನಿರ್ವಹಿಸಿದ್ದವು. ಒಂದೊಂದು ಕಂಪನಿ ಒಂದೊಂದು ದರ ನಿಗದಿ ಮಾಡಿದ್ದರಿಂದ ದರ ಏರಿಕೆಯಾಗಿದೆ ಎಂದು ತಿಳಿಸಿದರು.
ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಪ್ರತಿ ಕೆಜಿಗೆ 109 ರಿಂದ 325 ದರ ನಿಗದಿಯಾಗಿದೆ. ಇದೀಗ 114 ರಿಂದ 355 ತನಕ ದರ ಇದೆ. ಆದರೆ ಪ್ರತಿ ಕೆಜಿಗೆ 15-20 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇನ್ನು ಭತ್ತದ ಬೀಜಕ್ಕೆ 30-26 ರೂಪಾಯಿ ಹೆಚ್ಚಳವಾಗಿದೆ ಎಂದು ಹೇಳಿದರು.
ಬಿತ್ತನೆ ಬೀಜ ದರ ಏರಿಕೆ, ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ : ಸದ್ಯ ಕೃಷಿ ಇಲಾಖೆ ಅಧಿಕಾರಿಗಳು ನಮ್ಮಲ್ಲಿ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ ಎಂದು ದಾಖಲೆ ನೀಡ್ತಿದ್ದರೆ, ಇತ್ತ ಬಿಜೆಪಿ ರೈತ ಮೋರ್ಚಾ ಮಾತ್ರ ದಾಸ್ತಾನು ಕೊರತೆ ಇದ್ದು, ರಸಗೊಬ್ಬರ, ಬಿತ್ತನೆ ಬೀಜದ ದರವನ್ನು ಸರ್ಕಾರ ಏರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ಇನ್ನು ಪ್ರತಿಭಟನೆ ಕೂಡ ಮಾಡಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
"ಭೀಕರ ಬರಗಾಲದಿಂದ ರೈತರು ರೋಸಿ ಹೋಗಿದ್ದರೂ ಇದೀಗ ಉತ್ತಮ ಮಳೆ ಆಗುತ್ತೆ ಎಂದು ಹವಾಮಾನ ಇಲಾಖೆ ಹೇಳಿದೆ. ರೈತರು ಜಮೀನು ಉಳುಮೆ ಮಾಡಿ ಹದ ಮಾಡಿಕೊಂಡಿದ್ದೇವೆ. ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಇಲ್ಲವಾಗಿದೆ. ಇಲ್ಲಿತನಕ ಒಬ್ಬ ರೈತನಿಗೂ ಭತ್ತದ ಬೀಜ ಕೊಟ್ಟಿಲ್ಲ. ಕಳೆದ ಬಾರಿ ಒಂದು ಪ್ಯಾಕೆಟ್ಗೆ ಬಿತ್ತನೆ ಬೀಜದ ದರ 675 ರೂಪಾಯಿ ಇತ್ತು. ಇದೀಗ 1875 ಕ್ಕೆ ಏರಿಕೆ ಆಗಿದೆ. ರಸಗೊಬ್ಬರ ಕೂಡ 70% ರಷ್ಟು ಹೆಚ್ಚಳವಾಗಿದೆ. ಈ ಸರ್ಕಾರ ರೈತರ ಬಳಿ ಸುಲಿಗೆ ಮಾಡುತ್ತಿದೆ'' ಎಂದು ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಪೂರ್ವ ಮುಂಗಾರು ಬಿತ್ತನೆ: ರೈತರಿಗೆ ಕೃಷಿ ಇಲಾಖೆ ನಿರ್ದೇಶಕರಿಂದ ಮಹತ್ವದ ಮಾಹಿತಿ - Pre Monsoon Sowing