ಹುಬ್ಬಳ್ಳಿ: ಬಿರು ಬೇಸಿಗೆಯಿಂದ ತತ್ತರಿಸಿ ಹೋಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಮಧ್ಯಾಹ್ನದವರೆಗೂ ಬಿರು ಬೇಸಿಗೆಯಲ್ಲಿ ಬೆಂದಿದ್ದ ಹುಬ್ಬಳ್ಳಿಯ ಮಂದಿಗೆ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ. ನಗರದ ಕೆಲವಡೆ ಬಿರು ಗಾಳಿಯಿಂದಾಗಿ ಪ್ಲೆಕ್ಸ್ ಮತ್ತು ಬ್ಯಾನರ್ಗಳು ಗಾಳಿಗೆ ಹಾರಿ ಹೋಗುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.
ಕೆಲ ಕೆಳ ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ನಿವಾಸಿಗರು ಸಮಸ್ಯೆಗೆ ಸಿಲುಕಿದ್ದು, ಮನೆಯಲ್ಲಿ ನುಗ್ಗಿದ ನೀರನ್ನು ಹೊರಗೆ ಚೆಲ್ಲುವಲ್ಲಿ ತೊಡಗಿದ್ದಾರೆ. ರಸ್ತೆ ಅಭಿವೃದ್ಧಿ ಪ್ರದೇಶಗಳಲ್ಲಂತೂ ವಾಹನ ಸವಾರರು ಸರ್ಕಸ್ ಮಾಡುವಂತಾಗಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಮುಂಗಾರು ಮಳೆಯಿಂದಾಗಿ ರೈತರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಆಲಿಕಲ್ಲು ಸಹಿತ ಭಾರಿ ಮಳೆ..!: ಕಳೆದ ಹದಿನೈದು ದಿನಗಳಿಂದ 40, 41, 42 ಡಿಗ್ರಿ ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆರಾಯನ ಅಬ್ಬರದಿಂದ ಖುಷಿಯಾಗಿದೆ. ಆದರೇ ಗಾಳಿ ಸಹಿತ ಮಳೆಯಿಂದ ಹುಬ್ಬಳ್ಳಿಯ ಜನರು ಆತಂಕಗೊಂಡಿದ್ದಾರೆ. ಏಕಾಏಕಿ ವರುಣನ ಅಬ್ಬರ ಜೋರಾಗಿದ್ದು, ಬಿಸಿಲಿನ ತಾಪದ ಬೆನ್ನಲ್ಲೇ ಮಳೆರಾಯನ ಆಗಮನ ಹುಬ್ಬಳ್ಳಿಯ ಜನರನ್ನು ತಬ್ಬಿಬ್ಬು ಮಾಡಿದೆ. ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.