ಮಂಡ್ಯ: ಕೆಆರ್ಎಸ್ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ಬೆಂಗಳೂರಿನ ಜನರ ಜೀವಸೆಲೆ. ಇಂತಹ ಜಲಾಶಯಕ್ಕೆ ಅಪಾಯ ಎದುರಾಗಬಾರದು ಎಂದು ಬೇಬಿಬೆಟ್ಟದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೇಬಿಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟ (ಟ್ರಯಲ್ ಬ್ಲಾಸ್ಟ್) ಮಾಡಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆ ರೈತಸಂಘ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದೆ. ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು.
ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಸ್ಥಳ ಗುರುತಿಸಿ, ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಹೈಕೋರ್ಟ್ನಿಂದ ಈ ರೀತಿ ಆದೇಶವೇ ಆಗಿಲ್ಲ ಎಂದು ಹೇಳುತ್ತಿವೆ. ಅಲ್ಲದೆ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಮಾರ್ಚ್ 5ರಂದು ಕೆಆರ್ಎಸ್ನ ಬೃಂದಾವನ ಗೇಟ್ ಬಳಿ ಪ್ರತಿಭಟನೆ ನಡೆಸಿ ಗೋಬ್ಯಾಕ್ ಚಳುವಳಿ ನಡೆಸಿದ್ದರು.
ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸಂಸದೆ ಸುಮಲತಾ ಅಂಬರೀಶ್, ಜಿಲ್ಲಾಡಳಿತದ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಸೇರಿ ರೈತ ಮುಖಂಡರು ಭಾಗವಹಿಸಿದ್ದರು. ರೈತರ ಅಹವಾಲು ಸ್ವೀಕರಿಸುವ ವೇಳೆ ಬಹುತೇಕ ರೈತ ಮುಖಂಡರು ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಮೊದಲು ರೈತ ಮುಖಂಡರ ಅಭಿಪ್ರಾಯ ಕೇಳಿದ ಸಚಿವ ಎನ್.ಚಲುವರಾಯಸ್ವಾಮಿ, ಟ್ರಯಲ್ ಬ್ಲಾಸ್ಟ್ ಸಂಬಂಧ ಕೋರ್ಟ್ ಆದೇಶದ ಬಗ್ಗೆ ತಿಳಿಸಿದರು. ಸ್ವತಃ ಜಿಲ್ಲಾಧಿಕಾರಿ ಹೈಕೋರ್ಟ್ನಿಂದ ಬಂದಿರುವ ಆದೇಶವನ್ನು ಓದಿ ತಿಳಿಸಿದರು. ಇದು ಸಭೆಯಲ್ಲಿ ಜಟಾಪಟಿಗೆ ಕಾರಣವಾಯಿತು.
ರೈತ ಮುಖಂಡರ ಅಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಸಂಸದೆ ಸುಮಲತಾ ಮಾತನಾಡಲು ಮುಂದಾದಾಗ, ಆಕ್ಷೇಪ ವ್ಯಕ್ತಪಡಿಸಿದ ಸಚಿವರು, "ಮೊದಲು ರೈತರು ಮಾತನಾಡಲಿ, ಆ ನಂತರ ನೀವು ಮಾತನಾಡಿ. ಇಲ್ಲವಾದರೆ ನಾವೇ ಎರಡು ನಿಮಿಷ ಹೊರಗೆ ಹೋಗಿ ಬರುತ್ತೇವೆ" ಎಂದರು. ಹೀಗಾಗಿ ಸುಮಲತಾ ಸುಮ್ಮನಾದರು. ಇದರ ಮಧ್ಯೆ ಚಂದ್ರಶೇಖರ್ ಎಂಬ ರೈತ, "ನೀವೇ ನಾಗಮಂಗಲದಲ್ಲಿ ಗಣಿಗಾರಿಕೆ ನಡೆಸುತ್ತಿದ್ದೀರಿ" ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ಸಚಿವರು ಕೆಲಕಾಲ ಕೆಂಡಮಂಡಲರಾದರು.
ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, "ಜಲಾಶಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಹೈಕೋರ್ಟ್ ಆದೇಶದ ಅನ್ವಯ ಅಡ್ವೋಕೇಟ್ ಜನರಲ್ ಬಳಿ ಮಾತನಾಡಿ ಏನೆಲ್ಲಾ ಕ್ರಮ ವಹಿಸಬೇಕೊ ಅದನ್ನು ಮಾಡುತ್ತೇವೆ" ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಕೆಆರ್ಎಸ್ ಡ್ಯಾಂ ಸುತ್ತಮುತ್ತ ಗಣಿಗಾರಿಕೆ ನಿಷೇಧ: ಹೈಕೋರ್ಟ್ ಆದೇಶ ಸ್ವಾಗತಿಸಿದ ಸಂಸದೆ ಸುಮಲತಾ, ಹೋರಾಟಗಾರರು