ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಕಾಡಾನೆ ದಾಳಿಗಳು ಹೆಚ್ಚಾಗಿದ್ದು, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಅರಣ್ಯ ಇಲಾಖೆ ಹಿಂಜರಿದಂತೆ ಕಾಣುತ್ತಿದೆ. ಇದರ ಪರಿಣಾಮವಾಗಿ ಇಂದು ತೋಟಕ್ಕೆ ಹೋಗುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ನಡೆದಿದೆ.
ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ಮಿಕನನ್ನು ತಮಿಳುನಾಡು ಮೂಲದ ಶ್ರೀಧರ್ ಎಂದು ಗುರುತಿಸಲಾಗಿದೆ. ಮುಂಜಾನೆ ಎಂದಿನಂತೆ ತೋಟಕ್ಕೆ ಹೋಗುವಾಗ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರೀಧರ್ ನನ್ನು ತಕ್ಷಣವೇ ಚಿಕ್ಕಮಗಳೂರಿಗೆ ಚಿಕಿತ್ಸೆಗೆ ಎಂದು ಕರೆದುಕೊಂಡು ಬಂದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಶ್ರೀಧರ್ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದಂತೆ ಸ್ಥಳೀಯರು ಅಸ್ಪತ್ರೆಯತ್ತ ಆಗಮಿಸಿದರು. ಈ ವೇಳೆ, ರೈತ ಮುಖಂಡರೊಬ್ಬರು ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಶವಗಾರದ ಮುಂದೆಯೇ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರಬೇಕು. ಇಲ್ಲಿಯೇ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದರು. ಗಂಟೆಗೂ ಅಧಿಕ ಹೊತ್ತು ಪ್ರತಿಭಟನೆ ನಡೆಯಿತು. ಬಳಿಕ ಸ್ಥಳಕ್ಕೆ ಬಂದ ಡಿಎಫ್ಒ ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಕಾಡಾನೆಗಳ ಸ್ಥಳಾಂತರಕ್ಕೂ ಡಿಎಫ್ಒ ಭರವಸೆ ನೀಡಿದರು.
ಇದನ್ನೂ ಓದಿ : ಕಾಫಿನಾಡಿನಲ್ಲಿ ಹುಲಿ, ಕಾಡಾನೆ ಹಾವಳಿ: 5 ಜಾನುವಾರು ಸಾವು, ಬೆಳೆ ನಾಶ - Wild Elephants Menace