ಹಾವೇರಿ: ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆಯಲಾರಂಭಿಸಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರನ್ನು ಕ್ಷೇತ್ರಕ್ಕೆ ಕಳುಹಿಸಿಕೊಡುವಂತೆ ಒತ್ತಾಯಿಸಿ ಖಾದ್ರಿ ಅಭಿಮಾನಿಗಳು ದಿಢೀರ್ ಸಭೆ ನಡೆಸಿದರು.
ಶಿಗ್ಗಾಂವಿಯ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ ಅಭಿಮಾನಿಗಳು ಖಾದ್ರಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಬೆಂಗಳೂರಿಗೆ ತೆರಳಿದ್ದು, ಕಾಂಗ್ರೆಸ್ ಪ್ರಮುಖ ನಾಯಕರು ಖಾದ್ರಿ ಅವರನ್ನು ಕರೆಸಿಕೊಂಡಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದರೂ ಸಹ ಅವರನ್ನು ಬಿಡುತ್ತಿಲ್ಲ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
"ಇದು ನಮಗೆ ಮತ್ತು ಕಾರ್ಯಕರ್ತರು ಗೊಂದಲದಲ್ಲಿರುವಂತೆ ಮಾಡಿದೆ. ಅಜ್ಜಂಪೀರ್ ಖಾದ್ರಿ ಅವರು ಪಕ್ಷೇತರವಾಗಿ ಸ್ಪರ್ಧಿಸುವ ಒಬ್ಬ ಅಭ್ಯರ್ಥಿಯಾಗಿದ್ದು, ಅವರನ್ನು ಕಾಂಗ್ರೆಸ್ನ ಹಿರಿಯ ಮುಖಂಡರು ಹಿಡಿದಿಟ್ಟಿರುವುದು ನಮಗೆ ಗೊಂದಲ ತಂದಿದೆ" ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದರು. "ಕೂಡಲೇ ಅವರನ್ನು ಕ್ಷೇತ್ರಕ್ಕೆ ಕಳುಹಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದರು.
"ಕಾರ್ಯಕರ್ತರು ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದು, ಖಾದ್ರಿ ಅವರನ್ನು ಯಾವ ಉದ್ದೇಶಕ್ಕಾಗಿ ಅಲ್ಲಿ ಹಿಡಿದಿಟ್ಟಿದ್ದಾರೆ ಎಂಬುದು ಅವರ ಅಭಿಮಾನಿಗಳಿಗೆ ಬಹಳಷ್ಟು ಗೊಂದಲವನ್ನುಂಟು ಮಾಡಿದೆ. ಟಿಕೆಟ್ ನೀಡದೇ ಹೋದರೂ ಪರವಾಗಿಲ್ಲ ಅವರನ್ನು ಕ್ಷೇತ್ರಕ್ಕೆ ಕಳುಹಿಸಿಕೊಡಿ. ಅವರನ್ನು ನಂಬಿ ಸಹಸ್ರಾರು ಕಾರ್ಯಕರ್ತರು ಕಾಯುತ್ತಿದ್ದಾರೆ. ಚುನಾವಣೆಯ ಕುರಿತು ಚರ್ಚಿಸುವ ಅವಶ್ಯಕತೆ ಇದ್ದು ಕೂಡಲೇ ಅವರನ್ನು ಕಳುಹಿಸಿಕೊಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ" ಎಂದು ಕೈ ಮುಖಂಡರಿಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹಾಗೂ ಜಮೀರ್ ಅಹ್ಮದ್ ಅವರು ಕೂಡಲೇ ಖಾದ್ರಿ ಅವರನ್ನು ಕ್ಷೇತ್ರಕ್ಕೆ ಕಳುಹಿಸಿಕೊಡಬೇಕು. ಖಾದ್ರಿ ಅವರ ಹಿಂದೆ ಯಾರೂ ಇಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಆ ಶಕ್ತಿಯನ್ನು ಈ ಬಾರಿ ಮತವಾಗಿ ಹಾಕುವ ಮೂಲಕ ಖಾದ್ರಿಯವರ ಶಕ್ತಿ ಏನೆಂದು ತೋರಿಸಲು ನಾವು ಉತ್ಸುರಾಗಿದ್ದೇವೆ. ಹುಲಿಯನ್ನು ಬೋನಿನಲ್ಲಿ ಇಡದೆ ಹೊರಬಿಡಿ ಎಂದು ಗುಡುಗಿದರು.
ಇದನ್ನೂ ಓದಿ: ನನಗೆ ಕಾವಲು ಹಾಕಿದ್ದಾರೆ, ನನ್ನ ಜೊತೆ ಇಬ್ಬರನ್ನು ಬಿಟ್ಟಿದ್ದಾರೆ: ಅಜ್ಜಂಪೀರ್ ಖಾದ್ರಿ