ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ ದರ್ಶನ್ ಬಿಂದಾಸ್ ಲೈಫ್ ಫೋಟೋ ವೈರಲ್ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿಯ ಜೈಲ್ಗೆ ಶಿಫ್ಟ್ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಜೈಲು ಬಳಿ ಬೆಳಗ್ಗೆಯೇ ಆಗಮಿಸಿದ್ದಾರೆ.
ದರ್ಶನ್ ನೋಡಲು ಬಂದಿರುವ ಅಭಿಮಾನಿಗಳು, " ನಮಗೆ ದರ್ಶನ್ ಮೇಲಿನ ಆರೋಪದ ಬಗ್ಗೆ ಗೊತ್ತಿಲ್ಲ. ನಾವು ನಮ್ಮ ನೆಚ್ಚಿನ ನಟನನ್ನು ನೋಡಲು ಬಂದಿದ್ದೇವೆ. ಸಾಮಾನ್ಯವಾಗಿ ನಾವು ಹಿರೋಗಳನ್ನು ನೋಡಲು ಬೆಂಗಳೂರಿಗೆ ತೆರಳುತ್ತೇವೆ. ಆದರೆ, ಇದೀಗ ದರ್ಶನ್ ಬಳ್ಳಾರಿಗೆ ಬರುತ್ತಿದ್ದಾರೆ. ನಾವೆಲ್ಲ ದರ್ಶನ್ನನ್ನು ನೋಡಲು ಕಾತರರಾಗಿದ್ದೇವೆ. ಅವರನ್ನು ನೋಡಿಯೇ ನಾವು ಮನೆಗೆ ಹೋಗುತ್ತೇವೆ. ನೋಡಲು ಸ್ವಲ್ಪ ಅವಕಾಶ ಸಿಕ್ಕರೇ ಸಾಕು" ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಧಾರವಾಡಕ್ಕೆ ಆರೋಪಿ ಧನರಾಜ್ ಶಿಫ್ಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದ A9 ಆರೋಪಿಯಾಗಿರುವ ಧನರಾಜ್ನನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯದ ಆದೇಶಿಸಿದೆ. ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಆರೋಪಿ ಧನರಾಜ್ ಧಾರವಾಡಕ್ಕೆ ಶಿಫ್ಟ್ ಆಗಲಿದ್ದಾನೆ.
ಈ ಹಿನ್ನೆಲೆ ಧಾರವಾಡ ಕೇಂದ್ರ ಕಾರಾಗೃಹ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸಿಸಿಟಿವಿ ಸೇರಿದಂತೆ ಎಲ್ಲ ಭದ್ರತೆಯನ್ನು ಜೈಲು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಧಾರಾವಾಡದ ಜೈಲು ಒಟ್ಟು 9 ಬ್ಯಾರಕ್‌ಗಳು ಹೊಂದಿದ್ದು, ಸುಮಾರು 611 ಕೈದಿಗಳಿದ್ದಾರೆ.
ಇದನ್ನೂ ಓದಿ: ದರ್ಶನ್, ಸಹಚರರ ನ್ಯಾಯಾಂಗ ಬಂಧನ ಇಂದು ಅಂತ್ಯ - Darshan Judicial Custody