ಹುಬ್ಬಳ್ಳಿ : ಅಂಜಲಿ ಅಂಬಿಗೇರ ಹತ್ಯೆ ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಹುಬ್ಬಳ್ಳಿಯಂತಹ ನಗರದಲ್ಲಿ ಬಡವರು ಹಾಗೂ ಶ್ರೀಮಂತರು ಬದುಕಲಾರದ ಸ್ಥಿತಿ ನಿರ್ಮಾಣವಾಗಿದೆ. ಅಂಜಲಿ ಕುಟುಂಬದ ಶಿಕ್ಷಣದ ಜವಾಬ್ದಾರಿಯನ್ನು ಶಿರಹಟ್ಟಿಯ ಮಠ ನೋಡಿಕೊಳ್ಳುತ್ತದೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದಲ್ಲಿಂದು ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜಲಿ ಅಜ್ಜಿ ಗಂಗಮ್ಮ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರು 4 ಜನ ಹೆಣ್ಣುಮಕ್ಕಳನ್ನು ಕಟ್ಟಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕುಟುಂಬದಲ್ಲಿ ಯಾವ ಪುರುಷರೂ ಇಲ್ಲ. ಹೆಣ್ಣುಮಕ್ಕಳಲ್ಲಿ ಇಬ್ಬರು ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಹೋಗುತ್ತಿದ್ದಾರೆ. ಸರ್ಕಾರ ಕುಟುಂಬಕ್ಕೆ ಸೂರು, ಶಿಕ್ಷಣಕ್ಕೆ ಧನ ಸಹಾಯವನ್ನು ಮಂಜೂರು ಮಾಡಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಇಲ್ಲಿಯವರೆಗೆ ಆರೋಪಿಯನ್ನು ಪೊಲೀಸ್ ಇಲಾಖೆ ಬಂಧನ ಮಾಡದೇ ಇರುವುದರಿಂದ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ.
ಈ ಹಿಂದೆಯೇ ಕುಟುಂಬ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಕೂಡಾ ಪೊಲೀಸರು ಮೂಢನಂಬಿಕೆ ಎಂದು ಹೇಳಿ ಹಾರಿಕೆ ಉತ್ತರ ನೀಡಿ ಕಳುಹಿಸಿದ್ದಾರೆ. ಪೊಲೀಸ್ ಇಲಾಖೆ ಏನು ಕೆಲಸ ಮಾಡುತ್ತಿದೆ? ಎಂದು ಪ್ರಶ್ನಿಸಿದ ಶ್ರೀಗಳು, ಪೊಲೀಸ್ ಇಲಾಖೆ ಆ ದಿನವೇ ಅಂಜಲಿ ಕುಟುಂಬಕ್ಕೆ ಸ್ಪಂದಿಸಿ ಜಾಗೃತಿ ವಹಿಸಿದ್ದರೆ, ಇಂದು ಅಂಜಲಿ ಕೊಲೆಯಾಗುತ್ತಿರಲಿಲ್ಲ ಎಂದರು.
ಪ್ರೇಮ ಪ್ರಕರಣ ಎಂಬ ನೆಪವೊಡ್ಡಿ ಈ ರೀತಿಯಾಗಿ ಹೀನಾಯವಾಗಿ ಕೊಲೆ ಮಾಡಿದ್ದನ್ನು ನೋಡಿದರೆ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರ ಹಾಗೂ ನಾಯಕರು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
''ನೇಹಾ ಪ್ರಕರಣವು ಅಂದು ಚುನಾವಣೆ ಕಾರಣಕ್ಕೆ ರಾಜಕಾರಣಿಗಳು ರಾಷ್ಟ್ರಮಟ್ಟಕ್ಕೆ ಸುದ್ದಿ ಮಾಡಿದರು. ಆದರೆ ಇಂದು ಯಾರು ಅವರು ಕಾಣದೆ ಇರುವುದು ನಾಚಿಕೆಗೇಡು ಹಾಗೂ ನೀತಿಗೆಟ್ಟ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಅಂದು ನೇಹಾ ಪ್ರಕರಣವನ್ನು ರಾಜಕಾರಣಿಗಳು ಬೇರೆ ದಾರಿಗೆ ಒಯ್ದರು. ಈಗ ಈ ಪ್ರಕರಣವನ್ನು ಯಾವ ದಾರಿಗೆ ಒಯ್ಯುತ್ತಾರೆಂಬ ಅಳುಕು ಕಾಡುತ್ತಿದೆ. ಶೀಘ್ರವೇ ಸರ್ಕಾರ ಗಮನ ಹರಿಸಬೇಕಿದೆ'' ಎಂದು ಒತ್ತಾಯ ಮಾಡಿದರು.
ನಾಳೆ ಅಂಬಿಗೇರ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ರಾಜ್ಯದಲ್ಲಿ ಯೋಗಿ ಮಾದರಿ ಸಿಎಂ ಬೇಕು - ನಿರಂಜನ ಹಿರೇಮಠ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹ ಅವ್ಯವಸ್ಥೆ ಸುಧಾರಣೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ರಾಜ್ಯಕ್ಕೆ ಬೇಕು. ಅಲ್ಲದೇ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಬೇಕು ಎಂದು ನೇಹಾ ತಂದೆ ನಿರಂಜನ ಹಿರೇಮಠ ಅವರು ಆಗ್ರಹಿಸಿದ್ದಾರೆ.
ಅಂಜಲಿ ಅಂಬಿಗೇರ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೃಹ ಇಲಾಖೆ ಸಾಕಷ್ಟು ವೈಫಲ್ಯವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಸುಧಾರಿಸುವಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ವಿಫಲವಾಗಿದ್ದು, ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಸಿಎಂ ಬರಬೇಕು ಎಂದು ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲಾ ಕಡೆ ಯುವಕರು ಗಾಂಜಾ ಅಫೀಮು ಅಂತ ದಾರಿ ತಪ್ಪುತ್ತಿದ್ದಾರೆ. ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕರ್ನಾಟಕಕ್ಕೂ ಉತ್ತರಪ್ರದೇಶ, ಹೈದರಾಬಾದ್ ಮಾದರಿಯಲ್ಲೇ ಎನ್‌ಕೌಂಟರ್ ಆಗಬೇಕು. ಪೊಲೀಸರಿಗೆ ಆಯುಧ ಕೊಟ್ಟಿರುವುದು ಏಕೆ? ತುಕ್ಕು ಹಿಡಿಸುವುದಕ್ಕಾ? ಎನ್‌ಕೌಂಟರ್ ಮಾಡಿ ಎಂದು ಅವರು ಒತ್ತಾಯಿಸಿದರು.
ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು - ಮೂಜಗು ಶ್ರೀ : ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ ಉಳಿಯದಂತಾಗಿದೆ. ಈ ನೆಲದ ಕಾನೂನು ಉಳಿಸಿಕೊಳ್ಳಬೇಕಾದ್ರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಮೃತ ಅಂಜಲಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ನೇಹಾ ಹತ್ಯೆ ನಂತರ ಮತ್ತೊಂದು ಅಮಾನುಷ ಘಟನೆ ನಡೆದಿದೆ. ಒಬ್ಬ ಯುವಕ ಮನೆಗೆ ನುಗ್ಗಿ ನಿರ್ದಾಕ್ಷಿಣ್ಯವಾಗಿ, ನಿರ್ಭಯವಾಗಿ ಕೊಲೆ ಮಾಡಿದ್ದಾನೆ. ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ ಉಳಿದಂತಾಗಿದೆ ಎಂದರು.
ಈ ನೆಲದ ಕಾನೂನು ಉಳಿಸಿಕೊಳ್ಳಬೇಕಾದ್ರೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿ ಇಡೀ ಸಮಾಜ ಇಂತಹ ನೊಂದವರ ಪರವಾಗಿ ಬೆಂಬಲಕ್ಕೆ ನಿಲ್ಲಬೇಕು. ನೇಹಾ ಹತ್ಯೆ ಆದ ನಂತರ ಇಂತಹ ಮತ್ತೊಂದು ಸಂದರ್ಭ ಪದೇ ಪದೆ ಬರಬಾರದಿತ್ತು. ಈ ಮನೆಯಲ್ಲಿ ಯಾರಾದ್ರೂ ಓದುವವರು ಇದ್ದರೆ ನಮ್ಮ ಮಠದಿಂದ ಉಚಿತ ಶಿಕ್ಷಣ ನೀಡುವುದಾಗಿ ಶ್ರೀಗಳು ಭರವಸೆ ನೀಡಿದರು.
ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ - ಮಹೇಶ್ ಟೆಂಗಿನಕಾಯಿ : ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಹತ್ಯೆಯು ಹುಬ್ಬಳ್ಳಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದು, ಸರ್ಕಾರದ ಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಹತ್ಯೆಯಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ವಿಶ್ವನಾಥ ಬೆದರಿಕೆ ಹಾಕಿದ್ದಾಗ ಅಂಜಲಿ ಹಾಗೂ ಆಕೆಯ ಅಜ್ಜಿ, ಬೆಂಡಿಗೇರಿ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದರು. ಆದರೆ ಈ ಪರಿಸ್ಥಿತಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದರು.
ಈ ವಿಚಾರವಾಗಿ ಪೊಲೀಸ್ ಕಮಿಷನರ್ ಅವರಿಗೆ ಆಗ್ರಹ ಮಾಡಿದ್ದೆವು. ಈಗ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಸರ್ಕಾರದಲ್ಲಿ ಲೋಪ ಆಗಿದ್ದು ಸ್ಪಷ್ಟವಾಗಿ ಕಂಡು ಬಂದಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಅಂಜಲಿ ಹತ್ಯೆ ಬೆದರಿಕೆ ನಿರ್ಲಕ್ಷಿಸಿದ ಆರೋಪ; ಇಬ್ಬರು ಪೊಲೀಸರು ಸಸ್ಪೆಂಡ್ - Anjali Murder Case