ಮೈಸೂರು: ವಿವಾಹೇತರ ಸಂಬಂಧ ಪ್ರಶ್ನಿಸಿದ ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ, ವರದಕ್ಷಿಣೆ ತರುವಂತೆ ಪೀಡಿಸಿ ಆಕೆಯನ್ನು ಮನೆಯಿಂದಲೇ ಹೊರಹಾಕಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹಂದನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರದಕ್ಷಿಣಿ ಹಾಗೂ ಗಂಡನ ಕಿರುಕುಳದಿಂದ ಮನನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಕರಣದ ಸಂಪೂರ್ಣ ವಿವರ: ಸಂತ್ರಸ್ತೆ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಸಂಪತ್ ಕುಮಾರ್, ಅತ್ತೆ ಹಾಗು ಮಾವನ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಪತಿ ಪರಸ್ತ್ರೀಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದಾರೆ. ಇದನ್ನು ಪ್ರಶ್ನಿಸಿದ ನನಗೆ ಹಲ್ಲೆ ಮಾಡಿ ವರದಕ್ಷಿಣೆ ತರುವಂತೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
2015ರಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸಂಪತ್ ಕುಮಾರ್ ಜೊತೆ ಮಹಿಳೆಯ ವಿವಾಹವಾಗಿದ್ದಾರೆ. ನಗದು, ಚಿನ್ನಾಭರಣ ನೀಡಿ ಪೋಷಕರು ಮದುವೆ ಮಾಡಿದ್ದರು ಎಂಬ ಮಾಹಿತಿ ದೊರೆತಿದೆ. ಪ್ರಾರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿದ್ದರು. ನಂತರದ ದಿನಗಳಲ್ಲಿ ಸಂಪತ್ ಕುಮಾರ್ ವರದಕ್ಷಿಣೆಗಾಗಿ ಕಿರುಕುಳ ನೀಡಲು ಶುರು ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಮುಂದೆ, ದಿನಕಳೆದಂತೆ ಸಂಪತ್ ತನ್ನ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರಂತೆ. 2 ಲಕ್ಷ ರೂ, ಬ್ರೇಸ್ ಲೈಟ್ ಕೊಡಬೇಕೆಂದು ಪಟ್ಟು ಹಿಡಿದು ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಹಂದನಹಳ್ಳಿಯಲ್ಲಿ ಪಂಚಾಯಿತಿ ಕೂಡಾ ನಡೆದಿದೆ. ಹಿರಿಯರ ಸಮ್ಮುಖದಲ್ಲಿ ಪತ್ನಿಯನ್ನು ಮನೆಗೆ ಕರೆದೊಯ್ದಿದ್ದ ಸಂಪತ್ ಕುಮಾರ್ ನಂತರ ಮತ್ತೊಂದು ಮಹಿಳೆಯ ಜೊತೆ ಸಂಪರ್ಕ ಬೆಳೆಸಿದ್ದಾರೆ ಎಂಬುದು ಪತ್ನಿಯ ಆರೋಪ.
ಈ ಬಗ್ಗೆ ಪ್ರಶ್ನಿಸಿದಾಗ ಹಿಗ್ಗಾಮುಗ್ಗ ಥಳಿಸಿ ಮನೆಯಿಂದ ಹೊರಹಾಕಿದ್ದಾರೆ. ವಿವಾಹೇತರ ಸಂಬಂಧದಿಂದ ನನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಆಂಧ್ರ ರೈಲು ದುರಂತಕ್ಕೆ ಚಾಲಕ, ಸಹಾಯಕ ಚಾಲಕನ ಕ್ರಿಕೆಟ್ ಹುಚ್ಚು ಕಾರಣ: ಸಚಿವ ಅಶ್ವಿನಿ ವೈಷ್ಣವ್