ದಾವಣಗೆರೆ: ಅಭಿವೃದ್ಧಿ ಹೆಸರಲ್ಲಿ ಪರಿಸರವನ್ನು ನಾಶಪಡಿಸುತ್ತಿರುವ ಈ ದಿನಗಳಲ್ಲಿ ದಾವಣಗೆರೆಯ ಪರಿಸರಪ್ರೇಮಿ ಗೋಪಾಲ ಗೌಡ್ರು ಒಂದೂವರೆ ಸಾವಿರ ಗಿಡ-ಮರಗಳನ್ನು ಬೆಳೆಸಿ ರಸ್ತೆ, ಉದ್ಯಾನವನ್ನು ಹಚ್ಚ ಹಸಿರಾಗಿಸಿದ್ದಾರೆ. ದಾವಣಗೆರೆ ನಗರದ ಎಂಸಿಸಿಬಿ ಬ್ಲಾಕ್ ನಿವಾಸಿಯಾಗಿರುವ ಗೌಡ್ರು ಎಸಿ, ಫ್ರಿಡ್ಜ್ ಟೆಕ್ನಿಷಿಯನ್ ಕೆಲಸದೊಂದಿಗೆ ಸದ್ದಿಲ್ಲದೆ ಪರಿಸರ ಸಂರಕ್ಷಣೆಯ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಎಂಸಿಸಿಬಿ ಬ್ಲಾಕ್ ವೆಂಕಟೇಶ್ವರ ದೇವಾಲಯದ ರಸ್ತೆಯಲ್ಲಿ ಇವರು ನೆಟ್ಟಿದ್ದ ಗಿಡಗಳು ಇದೀಗ ಬೃಹತ್ ಮರಗಳಾಗಿವೆ. ಇಡೀ ರಸ್ತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲದೆ ತಾಪ ಏರಿಕೆಯಾದಾಗ ಜನಸಾಮಾನ್ಯರಿಗೆ ಈ ಮರಗಳು ನೆರಳಿನ ಆಸರೆ ನೀಡುತ್ತಿವೆ. ಪ್ರಾಣಿ-ಪಕ್ಷಿಗಳಿಗೂ ಆಶ್ರಯತಾಣವಾಗಿವೆ. ಇದಲ್ಲದೆ ಎಂಸಿಸಿಬಿ ಬ್ಲಾಕ್ನಲ್ಲಿರುವ ದಾವಣಗೆರೆ ಮ.ನ.ಪಾ ಈಜುಕೊಳದ ಮುಂಭಾಗದ ಉದ್ಯಾನವನದಲ್ಲೂ ಗಿಡಗಳನ್ನು ನೆಟ್ಟಿದ್ದಾರೆ.
ಪರಿಸರ ಪೂಜೆಗೆ ಹಲವು ಪ್ರಶಸ್ತಿ: ಇಲ್ಲಿಯವರೆಗೆ ಗೋಪಾಲ ಗೌಡ್ರು ಬೇವಿನ ಮರ, ಬಾದಾಮಿ ಮರ, ಹಣ್ಣಿನ ಮರಗಳು, ಹೊಂಗೇ ಮರ, ಸಂಪಿಗೆ ಮರ.. ಹೀಗೆ ನಾನಾ ಜಾತಿಯ ಗಿಡಗಳು ಸೇರಿ ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಗಿಡ ಮರಗಳನ್ನು ಬೆಳೆಸಿ ಅವುಗಳನ್ನು ಪೋಷಿಸುತ್ತಿದ್ದಾರೆ. ಇವರ ಪರಿಸರ ಉಳಿಸುವ ಕಾಳಜಿಗೆ ಪರಿಸರ ಮಿತ್ರ ನಾಗರೀಕ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಹಾನಗರ ಪಾಲಿಕೆಯಿಂದ ಪ್ರಶಸ್ತಿಗಳು ಸಂದಿವೆ.
ಗೋಪಾಲ ಗೌಡ್ರ ಪರಿಚಯ: ಗೋಪಾಲ ಗೌಡ್ರು ಮೂಲತಃ ಮಲೆನಾಡು ಭಾಗದವರಾಗಿದ್ದು, ದಾವಣಗೆರೆಗೆ ಬಂದು ನೆಲೆಸಿದ್ದಾರೆ. ಪರಿಸರವನ್ನು ಅತಿಯಾಗಿ ಪ್ರೀತಿಸುವ ಇವರು ದಾವಣಗೆರೆ ನಗರದಲ್ಲಿ ಎಲ್ಲೇ ಒಂದು ಮರ ಕಡಿದರೂ ಕೂಡ ಅಲ್ಲಿಗೆ ತಮ್ಮ ತಂಡದೊಂದಿಗೆ ಭೇಟಿ ನೀಡುತ್ತಾರೆ. ಇಂದಿಗೂ ಕೂಡ ಗಿಡಗಳನ್ನು ನೆಟ್ಟು ಬೆಳೆಸುವಂತೆ ಇವರ ತಂಡ ಜನರಲ್ಲಿ ಮನವಿ ಮಾಡುತ್ತಿದೆ.
ಗಿಡ ಕಡೀಬೇಡಿ, ನೆಟ್ಟು ಬೆಳೆಸಿ: ತಮ್ಮ ಪರಿಸರ ಕಾಳಜಿಯ ಬಗ್ಗೆ ಮಾತನಾಡುತ್ತಾ ಗೌಡ್ರು, "ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಆದರೆ ಇದು ಕೇವಲ ಮಾತಿಗೆ ಸೀಮಿತವಾಗಿದೆ. 13 ವರ್ಷಗಳಿಂದ ಇದುವರೆಗೆ ಒಟ್ಟು 1,500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇನೆ. ಪ್ರತಿಯೊಬ್ಬರೂ ಗಿಡಗಳನ್ನು ಕಡಿಯುವ ಬಗ್ಗೆ ಯೋಚಿಸುವ ಬದಲು, ನೆಡುವ ಉದ್ದೇಶ ಇಟ್ಟುಕೊಳ್ಳಬೇಕು" ಎಂದರು.
ಇದನ್ನೂ ಓದಿ: ಪರಿಸರದ ಮೇಲೆ ಪೊಲೀಸ್ ಪ್ರೀತಿ; ದುಡಿದ ಹಣವೆಲ್ಲ ಗಿಡ ನೆಡುವುದಕ್ಕೇ ಖರ್ಚು, ₹ 35 ಲಕ್ಷ ಸಾಲ! - Chandigarh Tree Man