ಹಾವೇರಿ: ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 2 ಹಂತದ ಚುನಾವಣೆ ನಡೆಯಲಿದ್ದು, ಮೊದಲನೆ ಹಂತ ಇದೇ 26 ಹಾಗೂ ಎರಡನೇ ಹಂತ ಮೇ 7 ರಂದು ಜರುಗಲಿದೆ. ಜೂನ್ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಪ್ರಚಾರ ಕೂಡ ಜೋರಾಗಿಯೇ ನಡೆಯುತ್ತಿದ್ದು, ಚುನಾವಣಾ ಆಯೋಗ ಶೇಕಡಾವಾರು ಮತದಾನ ಹೆಚ್ಚಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಕೆಲವು ಗ್ರಾಮಗಳು, ಪಟ್ಟಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿ, ಅಧಿಕಾರಿಗಳ, ಜನಪ್ರತಿನಿಧಿಗಳ ಭರವಸೆ ಮೇಲೆ ಮತ್ತೆ ಮತದಾನ ಬಹಿಷ್ಕಾರ ವಾಪಸ್ ಪಡೆದಿರುವ ಉದಾಹರಣೆಗಳಿವೆ.
ಆದರೆ ಹಾವೇರಿ ಜಿಲ್ಲೆಯಲ್ಲಿ ಇದಕ್ಕೆ ವಿಭಿನ್ನವಾದ ಕಾರಣಕ್ಕೆ ಚುನಾವಣಾ ಬಹಿಷ್ಕಾರ ಪ್ರಕರಣ ವರದಿಯಾಗಿದೆ. ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣ ನಿವಾಸಿಗಳು ಇದೀಗ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಾರಣ ಊರ ಜಾತ್ರೆಗೆ ಡಿಜೆ ಹಾಕಲು ಅನುಮತಿ ನೀಡದಿರುವುದು. ಹೌದು, ರಟ್ಟಿಹಳ್ಳಿಯಲ್ಲಿ ಇಂದಿನಿಂದ ದುರ್ಗಾದೇವಿ ಜಾತ್ರೆ ನಡೆಯುತ್ತಿದೆ. ಈ ಕುರಿತಂತೆ ಜಾತ್ರಾ ಕಮಿಟಿಯವರು ಎಲ್ಲ ರೀತಿಯ ಅನುಮತಿ ಪಡೆದಿದ್ದಾರೆ. ಆದರೆ ಸೋಮವಾರ ಕಮಿಟಿಯವರಿಗೆ ಪೊಲೀಸ್ ಇಲಾಖೆ ಡಿಜೆಗೆ ಅನುಮತಿ ಇಲ್ಲ ಎಂದು ತಿಳಿಸಿದೆ. ಕಾರಣ ಕೇಳಿದರೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತಿ ಇದೆ. ಹೀಗಾಗಿ ಡಿಜೆಗೆ ಅನುಮತಿ ಇಲ್ಲಾ ಎಂದು ತಿಳಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ಕಮಿಟಿಯವರು ದೇವಿ ಜಾತ್ರೆಗೆ ಡಿಜೆ ಹಾಕಲು ಅವಕಾಶ ನೀಡದ ಚುನಾವಣೆ ನಮಗೆ ಬೇಡ ಎಂದು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಕುರಿತಂತೆ ರಟ್ಟಿಹಳ್ಳಿ ತಹಶೀಲ್ದಾರ್‌ಗೆ ಪಟ್ಟಣ ನಿವಾಸಿಗಳು 'ಒಂದು ತಮಗೆ ಡಿಜೆ ಹಚ್ಚಲು ಅನುಮತಿ ನೀಡಿ. ಚುನಾವಣೆ ನೀತಿ ಸಂಹಿತೆ ಕಾರಣದಿಂದ ಡಿಜೆಗೆ ಅನುಮತಿ ನೀಡದಿದ್ದರೇ ನಮಗೆ ಚುನಾವಣೆಯೇ ಬೇಡ ಎಂದು ಮನವಿ ಸಲ್ಲಿಸಿದ್ದಾರೆ. ಜನರ ಈ ಮನವಿಗೆ ತಹಶೀಲ್ದಾರ್ ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ: ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ, ಇಲ್ಲದಿದ್ದರೆ ಚುನಾವಣಾ ಬಹಿಷ್ಕಾರ: ಆದಿವಾಸಿಗಳ ಎಚ್ಚರಿಕೆ - Election boycott warning