ಬೆಂಗಳೂರು : ಭಾರತದಲ್ಲಿ ಪ್ರತಿ ವರ್ಷ ಸುಮಾರು 50,000 ಮಕ್ಕಳು ರೋಗದಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳ ಸಂಖ್ಯೆಯು ಕಳೆದ ಎರಡು-ಮೂರು ದಶಕಗಳಲ್ಲಿ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಅಂಕಾಲಾಜಿ ಅಂಡ್ ಹೆಮಟಾಲಾಜಿಯ ಕನ್ಸಲೆಂಟ್ ಡಾ. ಇಂತಝಾರ್ ಮೇಹಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾರಕ ರೋಗದ ಬಗ್ಗೆ ಮಾತನಾಡಿದರು.''ಮಕ್ಕಳಲ್ಲಿ ಉಂಟಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಿಗೆ ಮೂಲ ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಅನುವಂಶೀಯತೆ, ಪರಿಸರ ಮತ್ತು ಸೋಂಕುಗಳು ಹರಡಿರುವುದು ಈ ರೋಗಕ್ಕೆ ಕಾರಣವಾಗಿವೆ ಎಂದರು.
ಒಂದು ಖುಷಿಯ ವಿಚಾರವೇನೆಂದರೆ, ವಯಸ್ಕ ಕ್ಯಾನ್ಸರ್ ರೋಗಿಗಳಿಗಿಂತ ರೋಗ ಪೀಡಿತ ಮಕ್ಕಳಲ್ಲಿ ಗುಣಮುಖರಾಗುವ ಪ್ರಮಾಣ ಹೆಚ್ಚಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶೇ. 80- 85 ರಷ್ಟು ಮಕ್ಕಳು ಈ ರೋಗದಿಂದ ಗುಣಮುಖರಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಗುಣಮುಖರಾಗುವ ಪ್ರಮಾಣ ಸುಧಾರಣೆಯಾಗುತ್ತಿದೆ. ಇನ್ನೂ ಉತ್ತಮ ಫಲಿತಾಂಶ ಬರಬೇಕೆಂದರೆ, ರೋಗವನ್ನು ಆರಂಭದಲ್ಲಿಯೇ ಪತ್ತೆ ಮಾಡಿ, ಸುಲಭ ಮಾರ್ಗದಲ್ಲಿ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ''ಎಂದು ಸಲಹೆ ನೀಡಿದರು.
ಇವು ಕ್ಯಾನ್ಸರ್‌ನ ಆರಂಭಿಕ ಎಚ್ಚರಿಕೆಯ ಸೂಚನೆ: ಯಾವುದೇ ಕಾರಣಕ್ಕೂ ಲಕ್ಷಣಗಳು ಗೊತ್ತಾದ ತಕ್ಷಣ ಸೂಕ್ತ ಚಿಕಿತ್ಸೆ ಆರಂಭಿಸುವುದನ್ನು ಮರೆಯಬಾರದು. ಸಾಮಾನ್ಯವಾಗಿ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ನ ಚಿಹ್ನೆಗಳು ಮತ್ತು ಲಕ್ಷಣಗಳು ನಿರ್ದಿಷ್ಟವಾಗಿರಲ್ಲ ಮತ್ತು ಸೂಕ್ಷ್ಮವಾಗಿರುತ್ತವೆ. ಎಡೆಬಿಡದೆ ಬರುವ ಜ್ವರ, ತೂಕದಲ್ಲಿ ನಷ್ಟ ಉಂಟಾಗುವುದು, ರಾತ್ರಿಯಲ್ಲಿ ಬೆವರುವುದು, ಕುತ್ತಿಗೆ, ಅರ್ಮ್ ಪಿಟ್ ಅಥವಾ ತೊಡೆಸಂದುಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು, ತಲೆನೋವು, ವಾಂತಿ ಮತ್ತು ಅನಾರೋಗ್ಯಕ್ಕೆ ತುತ್ತಾಗುವುದು. ಊತ ಮತ್ತು ರಕ್ತಸ್ರಾವ ಆಗುವುದರ ಬಗ್ಗೆ ಪೋಷಕರು ಗಮನಹರಿಸಬೇಕು. ಈ ರೋಗಲಕ್ಷಣಗಳು ಮಕ್ಕಳಲ್ಲಿ ಕ್ಯಾನ್ಸರ್‌ನ ಆರಂಭಿಕ ಎಚ್ಚರಿಕೆಯ ಸೂಚನೆಯಾಗಿರಬಹುದು ಎಂದು ಹೇಳಿದರು.
ಮಕ್ಕಳಲ್ಲಿ ಲುಕೆಮಿಯಾ, ಲಿಂಫೋಮಾಗಳು ಮತ್ತು ಮೆದುಳಿನಲ್ಲಿ ಗೆಡ್ಡೆಗಳು ಕಂಡು ಬರುವ ಕ್ಯಾನ್ಸರ್ಗಳಾಗಿವೆ. ವಿಲ್ಯೂ ಮರ್, ನ್ಯೂರೋಬ್ಲಾಸ್ಮಾ, ಬೋನ್ ಟ್ಯೂಮರ್, ಸಾಫ್ಟ್ ಟಿಶೂ ಟ್ಯೂಮರ್ ಮತ್ತು ಲಿವರ್, ಐ ಟ್ಯೂಮರ್ಗಳು ಇತರೆ ಸಾಮಾನ್ಯ ಕ್ಯಾನ್ಸರ್ಗಳಾಗಿವೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಯೋಜನೆಗಳು ಅತ್ಯಗತ್ಯ: ಈ ಸಂದರ್ಭದಲ್ಲಿ ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಅಂಕಾಲಾಜಿ ಕನ್ಸಲೆಂಟ್ ಡಾ. ಸುಮಾ ಮಾತನಾಡಿ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗಳ ಲಭ್ಯತೆಯ ನಡುವೆ ವ್ಯಾಪಕ ಅಂತರವಿದೆ. ಈ ಅಂತರವನ್ನು ನೀಗಿಸಬೇಕಾಗಿದೆ. ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಸರ್ಕಾರದ ಯೋಜನೆಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದರು.
ಸರ್ಕಾರ ಮತ್ತು ಖಾಸಗಿ ವಲಯದ ನಡುವೆ ಈ ನಿಟ್ಟಿನಲ್ಲಿ ಸಹಯೋಗ ಏರ್ಪಡಬೇಕು. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ನಡುವಿನ ಉತ್ತಮ ಸಹಯೋಗವು ದೇಶದಲ್ಲಿ ಕ್ಯಾನ್ಸರ್ ಹೊಂದಿರುವ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಎನ್ಜಿಒಗಳು ಕೂಡ ಪ್ರತಿ ವರ್ಷ ಸಾವಿರ ಮಕ್ಕಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಬಹು ಪ್ರಮುಖವಾದ ಪಾತ್ರ ನಿರ್ವಹಿಸುತ್ತಿವೆ ಎಂದರು.
ಇದನ್ನೂ ಓದಿ : ಉತ್ತರಕನ್ನಡದಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್; ಜಿಲ್ಲಾಸ್ಪತ್ರೆಯಲ್ಲೇ 225ಕ್ಕೂ ಹೆಚ್ಚು ಕೇಸ್ ಪತ್ತೆ