ಪುತ್ತೂರು (ದಕ್ಷಿಣಕನ್ನಡ): ಲಾರಿಯೊಂದಕ್ಕೆ ಟಯರ್ ಜೋಡಣೆ ವೇಳೆ ಟಯರ್ ರಿಂಗ್ ಚಿಮ್ಮಿ ಟಯರ್ ಸಮೇತ ಬಿದ್ದ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿನ್ನೆ ರಾತ್ರಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕರಾಯ ಜನತಾ ಕಾಲೋನಿ ನಿವಾಸಿ ರಶೀದ್ ಎಂದು ಗುರುತಿಸಲಾಗಿದೆ.
ನಡೆದಿದ್ದೇನು?: ಲಾರಿಯೊಂದರ ಟಯರ್ ಪಂಕ್ಚರ್ ಆದ ಪರಿಣಾಮ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಕ್ಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್ ಅನ್ನು ತಂದಿದ್ದರು. ಟಯರ್ ಜೋಡಣೆಗೆ ಆಟೋದಲ್ಲಿ ಕಾರ್ಮಿಕ ರಶೀದ್ನನ್ನು ಕರೆದುಕೊಂಡು ವಾಹನದ ಚಾಲಕ ಬಂದಿದ್ದರು. ಜೋಡಣೆ ವೇಳೆ ಟಯರ್ ಬ್ಲಾಸ್ಟ್ ಆಗಿ ರಿಂಗ್ ಹೊರ ಚಿಮ್ಮಿದೆ. ಪರಿಣಾಮ ವಾಹನದ ಚಾಲಕ ಮತ್ತು ಟಯರ್ ಜೋಡಣೆಗೆ ಬಂದಿದ್ದ ರಶೀದ್ ಬ್ಲಾಸ್ಟ್ ರಭಸಕ್ಕೆ ಟಯರ್ ಸಮೇತ ಕೊಂಚ ದೂರ ಬಿದ್ದಿದ್ದಾರೆ.
ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕ ರಶೀದ್ನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಚಾಲಕನಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ಈ ಘಟನೆ ಸಿಸಿಟಿವಿ ಸೆರೆಯಾಗಿದೆ.
ಓದಿ: ನೇಪಾಳ ಕಠ್ಮಂಡು ಏರ್ಪೋರ್ಟ್‌ನಲ್ಲಿ ವಿಮಾನ ಪತನ; 18 ಮಂದಿ ಸಾವು, ಪೈಲಟ್ ಬಚಾವ್ - Nepal Plane Crash