ಮೈಸೂರು: ಕೋಮುವಾದ, ಮತೀಯವಾದ ಅಳಿಸಿ, ಪ್ರಜಾಪ್ರಭುತ್ವ ಉಳಿಸಬೇಕಾದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ಈ ಮೂಲಕ ದೇಶದಲ್ಲಿರುವ ಸರ್ವಾಧಿಕಾರಿ ಆಡಳಿತವನ್ನು ಕೊನೆಗಾಣಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕರೆ ನೀಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹೆಚ್.ಡಿ.ಕೋಟೆಯ ಕನಕ ಭವನದಲ್ಲಿ ನಡೆದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಈ ಸಭೆ ರಾಷ್ಟ್ರಿಯ ವಿಚಾರ ಚರ್ಚಿಸುವಂಥ ಅತ್ಯಂತ ಪ್ರಮುಖ ವೇದಿಕೆಯಾಗಿದ್ದು, ನಮ್ಮ ತಪ್ಪುಗಳಿಂದ ಎಡವಿದರೆ ಮುಂದೆ ದೇಶದಲ್ಲಿ ಚುನಾವಣೆ ನಡೆಯುವುದೇ ಅನುಮಾನ. ಪ್ರಜಾಪ್ರಭುತ್ವದ ಕೊನೆಯ ಚುನಾವಣೆ ಇದಾಗಿದ್ದು, ನಾವೆಲ್ಲರೂ ಸವಾಲಾಗಿ ಸ್ವೀಕರಿಸಿ ಪಕ್ಷಕ್ಕೆ ಬಹುಮತ ನೀಡಬೇಕು ಎಂದು ಹೇಳಿದರು.
ಪಾರದರ್ಶಕ ಮತ್ತು ಪ್ರಾಮಾಣಿಕವಾದ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರ ಆರ್‌ಟಿಐ ಎಂಬ ಪ್ರಬಲ ಕಾಯ್ದೆ ಜಾರಿ ಮಾಡಿದೆ. ಇದು ಜನರಿಗೆ ಪ್ರಶ್ನಿಸುವ ಹಕ್ಕು ನೀಡಿದೆ. ಆದರೆ ಬಿಜೆಪಿ ಸರ್ಕಾರವು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯನ್ನು ಗೌಪ್ಯವಾಗಿಡಲು ಚುನಾವಣಾ ಬಾಂಡ್ ಜಾರಿ ಮಾಡಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸಾವಿರಾರು ಕೋಟಿ ರೂಪಾಯಿ ಪಡೆದಿದೆ.
ಕಾಂಗ್ರೆಸ್ ಸರ್ಕಾರವು ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿತು. ಬಿಜೆಪಿಯು ರೈತ ವಿರೋಧಿ ಕಾಯ್ದೆ ಜಾರಿಗೆ ತಂದು ಅನ್ಯಾಯವೆಸಗಿತು. ಅವೈಜ್ಞಾನಿಕವಾಗಿ ನೋಟು ಅಮಾನ್ಯೀಕರಣ ಜಾರಿ ಮಾಡಿದರು. ಇದರಿಂದ ಕಪ್ಪು ಹಣ ನಿಯಂತ್ರಿಸಲಾಗಿಲ್ಲ. ಬೆಲೆ ಏರಿಕೆಯಿಂದ ಜನರ ಕೈಯಲ್ಲಿ ಹಣವೇ ಇಲ್ಲದಂತಾಗಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಮೈಸೂರು-ಚಾಮರಾಜನಗರ ಭಾಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಯುವಕರು ಹೆಚ್ಚಾಗಿ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ತಮ್ಮ ಕ್ಷೇತ್ರಗಳಲ್ಲಿ ಶಾಂತಿ, ಸೌಹರ್ದತೆ, ಪ್ರೀತಿ ನೆಲೆಸುವಂತೆ ನೋಡಿಕೊಳ್ಳಬೇಕು. ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಸೇರಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಯುವನಾಯಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ಈ ಕ್ಷೇತ್ರದ ಬಗ್ಗೆ ಮಾಜಿ ಸಂಸದರಾದ ಆರ್.ಧ್ರುವನಾರಾಯಣ ಅವರಿಗೆ ವಿಶೇಷ ಕಾಳಜಿ ಇತ್ತು. ಅದರಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರಂತೆಯೇ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ಕಾರ್ಯಕರ್ತರೂ ತಾವೇ ಅಭ್ಯರ್ಥಿ ಎಂದು ಭಾವಿಸಿ ಎಲ್ಲಾ ಮತದಾರರಿಂದ ಮತ ಹಾಕಿಸಬೇಕೆಂದು ಕೇಳಿಕೊಂಡರು.
ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಮ್ಮ ಕಾರ್ಯಕ್ರರ್ತರು ಪ್ರತಿ ಮನೆಗೂ ಭೇಟಿ ನೀಡಿ ಪಕ್ಷದ ಸಾಧನೆಗಳನ್ನು ತಿಳಿಸಬೇಕು. ಜನರ ಬಳಿಗೆ ತೆರಳಿ ಮತ ಕೇಳಲು ಹಿಂಜರಿಯಬೇಕಿಲ್ಲ. ಅನೇಕ ಕೊಡುಗೆಯನ್ನು ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದೆ. ಹೀಗಾಗಿ ನಮ್ಮ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಪರವಾಗಿ ಮತಯಾಚನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ತುಮಕೂರು: ಜೆಡಿಎಸ್, ಕಾಂಗ್ರೆಸ್ ಮುಖಂಡರ ಪಕ್ಷಾಂತರ ಪರ್ವ - JDS Congress Leaders Defection