ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಧನಂಜಯ್ ಸರ್ಜಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪಕ್ಷ ನಿರ್ಧರಿಸಿದೆ.
ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕುರಿತು ತೀವ್ರ ಕುತೂಹಲವಿತ್ತು. ಡಾ. ಧನಂಜಯ ಸರ್ಜಿ ಸೇರಿ ಹಲವರ ಹೆಸರು ಮುನ್ನೆಲೆಗೆ ಬಂದಿತ್ತು. ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಧನಂಜಯ ಸರ್ಜಿ ಅವರಿಗೆ ಟಿಕೆಟ್ ಘೋಷಿಸಿದೆ. ಈ ಮೂಲಕ ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದಂತೆ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಆಯನೂರು ಮಂಜುನಾಥ್ ಸ್ಪರ್ಧಿಸಲಿದ್ದಾರೆ.
ಡಾ.ಧನಂಜಯ್ ಸರ್ಜಿ ಅವರು ಶಿವಮೊಗ್ಗ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಮಕ್ಕಳ ವೈದ್ಯರಾಗಿ ಚಿರಪರಿಚಿತರು. ಶಿವಮೊಗ್ಗದ ವಾತ್ಸಲ್ಯ ಆಸ್ಪತ್ರೆಯಿಂದ ತಮ್ಮ ಜರ್ನಿ ಪ್ರಾರಂಭಿಸಿದ ಅವರು ನಂತರ ಸರ್ಜಿ ಮಕ್ಕಳ ಆಸ್ಪತ್ರೆ ಪ್ರಾರಂಭಿಸಿದರು. ನಂತರ ಎಲ್ಲ ವಯೋಮಾನದವರಿಗೂ ಸುಸಜ್ಜಿತ ಆಸ್ಪತ್ರೆಯನ್ನು ತೆರೆದಿದ್ದಾರೆ.
ಕಳೆದ ಐದು ವರ್ಷಗಳಿಂದ ಬಿಜೆಪಿ ಪಕ್ಷ ಸೇರಿದ ಡಾ.ಧನಂಜಯ್ ಸರ್ಜಿ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ನೈರುತ್ಯ ಪದವೀಧರ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳನ್ನು ಒಳಗೊಂಡಿದೆ.
ಇದನ್ನೂಓದಿ:ಲೋಕಸಭೆ ಚುನಾವಣೆ, ಬಿಜೆಪಿ ಅವಲೋಕನ ಸಭೆ : ಟಾರ್ಗೆಟ್ ರೀಚ್ ಕುರಿತು ಹೈಕಮಾಂಡ್ಗೆ ವರದಿ? - BJP Review Meeting