ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ ಅವ್ಯವಹಾರ ಹಗರಣವನ್ನು ಮುಚ್ಚಿ ಹಾಕಲು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲು ರಾಹುಲ್ ಗಾಂಧಿಯವರು ಬಂದಿದ್ದಾರಾ? ಅಥವಾ ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯಲು ಸಭೆ ಕರೆದಿದ್ದಾರಾ? ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ನಾರಾಯಣ್ ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರ್ಕಾರವಿದು. ನೀವು ಈ ಸರ್ಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ? ಎಂದು ಕೇಳಿದರು. ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ರಾಜೀನಾಮೆಯೇ? ಪಕ್ಷದಿಂದ ಉಚ್ಚಾಟಿಸುವಿರಾ? ಅವರನ್ನು ಬಂಧಿಸುವಿರಾ? ಸಾಕ್ಷಿ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ್ದ ಸಚಿವ ಶರಣಪ್ರಕಾಶ್ ಪಾಟೀಲರನ್ನು ಬಂಧಿಸುವಿರಾ? ಅವರ ಉಚ್ಚಾಟನೆ ಮಾಡುವಿರಾ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.
ಹಗರಣ ದೊಡ್ಡ ಜಾಲ ಇದ್ದಂತಿದೆ. ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕಿದೆ. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೆ ನಾಗೇಂದ್ರ ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ ಎಂದು ಹೇಕಿದರು.
ರಾಜ್ಯದ ಇಡೀ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ. ದಲಿತರ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆಯಾಗಿದೆ. ಸಾಕ್ಷಿ ನಾಶಕ್ಕೆ ನಿಮ್ಮಲ್ಲಿ ಏನು ಉತ್ತರ ಇದೆ ಎಂದು ಅವರು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಗಳಿಗೆ ಕಿಂಚಿತ್ತು ನೈತಿಕತೆ, ಮೌಲ್ಯ ಇದ್ದರೆ ಏನಾದರೂ ನಿಮ್ಮ ಅನುಭವಕ್ಕೆ ಗೌರವ ಇದ್ದರೆ, ಮೊದಲು ರಾಜೀನಾಮೆ ಕೊಡಿ. ನಿಮ್ಮ ಇಲಾಖೆಯಡಿ ಹಗರಣ ಆಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಇನ್ನು, ಮೋದಿ ಸಂಪುಟದಲ್ಲಿ ಯಾವಾಗಲೂ ಕರ್ನಾಟಕಕ್ಕೆ ಒಳ್ಳೆಯ ಪ್ರಾತಿನಿಧ್ಯ ಸಿಕ್ಕಿದೆ. ನ್ಯಾಯ ಸಿಕ್ಕಿದೆ, ಉತ್ತೇಜನ ಸಿಕ್ಕಿದೆ. ಎಲ್ಲಾ ಸಂದರ್ಭದಲ್ಲಿಯೂ ಉತ್ತೇಜನ ಸಿಗುವ ಕೆಲಸವಾಗಲಿದೆ. ಈ ಬಾರಿ ಯಾರಿಗೆ ಅವಕಾಶ ನೀಡಬೇಕು, ಎಷ್ಟು ಸಚಿವ ಸ್ಥಾನ ನೀಡಬೇಕು ಎಂದು ಮೋದಿ ನಿಶ್ಚಯ ಮಾಡಲಿದ್ದಾರೆ. ಎಲ್ಲರ ಜೊತೆ ಸಮಾಲೋಚನೆ ನಡೆಸಿಯೇ ನಿರ್ಧಾರ ಮಾಡಲಿದ್ದಾರೆ. ಕರ್ನಾಟಕಕ್ಕೆ ಸಾಕಷ್ಟು ಉತ್ತೇಜನ, ಪ್ರಾತಿನಿಧ್ಯ ಸಿಕ್ಕಿದೆ. ಈಗಲೂ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಸಿ. ಟಿ ರವಿ 8 ಪ್ರಶ್ನೆ - C T Ravi