ವಿಜಯಪುರ : ಎಸ್.ಸಿ ಮೀಸಲು ಮತಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಿಶ್ಚಿತ ಎಂದು ಟಿಕೆಟ್ ವಂಚಿತ ಡಾ. ಬಾಬು ರಾಜೇಂದ್ರ ನಾಯಕ್ ಅವರು ಘೋಷಿಸಿದ್ದಾರೆ. ಅಲ್ಲದೇ ಟಿಕೆಟ್ ತಪ್ಪಲು ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿಯ ಷಡ್ಯಂತ್ರವೇ ಕಾರಣ ಎಂದು ಆರೋಪಿಸಿದರು.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಶಕದಿಂದ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕನಾಗಿ ಸೇವೆ ಸಲ್ಲಿಸಿದ್ದೇನೆ. ಶಾಲಾ ದಿನಗಳಲ್ಲಿ ಸ್ವಯಂ ಸೇವಕ, ಕಾಲೇಜು ದಿನಗಳಲ್ಲಿ ಎಬಿವಿಪಿ ಕಾರ್ಯಕರ್ತ. ನಂತರ ಸಂಘದ ಆಯಾಮವಾದಂತಹ ಧರ್ಮಜಾಗರಣ ಪ್ರಾಂತದ ಪ್ರಮುಖನಾಗಿ ಸಹಸ್ರಾರು ಮತಾಂತರವಾದಂತಹ ಬಂಜಾರಿಗರನ್ನ ಮತ್ತೆ ಮಾತೃಧರ್ಮಕ್ಕೆ ತರುವಂತಹ ಮಹೋನ್ನತ ಕಾರ್ಯಕ್ಕೆ ನನ್ನನ್ನ ತೊಡಗಿಸಿಕೊಂಡು, ಅವರನ್ನೆಲ್ಲ ಮತ್ತೆ ಮರಳಿ ಮಾತೃಧರ್ಮಕ್ಕೆ ತಂದಂತಹ ತೃಪ್ತಿ ಇದೆ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಬೇಕೆಂದು ಅಭಿಲಾಷೆ ಇತ್ತು. ಸಮಾಜದ ಒತ್ತಾಸೆ ಇತ್ತು. ಸಹಸ್ರಾರು ಕಾರ್ಯಕರ್ತರ ಕೂಗು ಕೂಡ ಇತ್ತು. ಎಲ್ಲೋ ಆ ಕೂಗನ್ನು ಹತ್ತಿಕ್ಕಲಾಗಿದೆ ಎಂದರು.
ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ, ಪಟ್ಟಿ ಬಿಡುಗಡೆಯಾಗುವ ಕೊನೆಯ ಕ್ಷಣದವರೆಗೂ ನಾನೇ ಅಭ್ಯರ್ಥಿ ಅಂತ ಹಿರಿಯರು, ಮುಖಂಡರು, ಮಹಾನ್‌ನಾಯಕರು ನನಗೆ ಭರವಸೆ ಕೊಟ್ಟಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಕ್ಕೆ ವಿಜಯಪುರ ಜಿಲ್ಲೆಯ ಅಭಿವೃದ್ಧಿ ಎಲ್ಲೋ ಒಂದು ಕಡೆ ಮರೀಚಿಕೆಯಾಗ್ತಿದೆ ಎಂದು ನನಗನಿಸುತ್ತಿದೆ ಎಂದಿದ್ದಾರೆ.
ಆದರಣೀಯ ಪ್ರಧಾನಮಂತ್ರಿಗಳ ಕನಸು ಆದಂತಹ ಭಾರತ ವಿಶ್ವಗುರುವಾಗಬೇಕು. ವಿಕಸಿತ ಭಾರತವಾಗಬೇಕು ಎನ್ನುವ ಅಭಿಲಾಷೆ ಏನಿತ್ತು, ಆ ಕನಸನ್ನ ಭಂಗ ಮಾಡುವಲ್ಲಿ ಈ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿದ್ದಾವೆ ಎಂದು ಹೇಳಲು ಇಚ್ಛೆ ಪಡುತ್ತಿದ್ದೇನೆ. ವಿಜಯಪುರ ಜಿಲ್ಲೆ ದಶಕಗಳಿಂದ ಹಲವಾರು ಯೋಜನೆಗಳಿಂದ ದೂರ ಆಗಿದೆ. ಹಲವಾರು ದಶಕಗಳು ಕಳೆದರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಪೂರ್ತಿಯಾಗುತ್ತಿಲ್ಲ ಎಂದರು.
ಯಾವುದೇ ಮಹತ್ತರವಾದ ದೊಡ್ಡ ದೊಡ್ಡ ಯೋಜನೆಗಳು ಈ ಜಿಲ್ಲೆಗೆ ಬಂದಿಲ್ಲ. ಯಾವಾಗಲೂ ಈ ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಜಿಲ್ಲೆಯಾಗಿದೆ. ಜನ ಬರದಿಂದ ಕಂಗೆಟ್ಟು ಹೋಗಿದ್ದಾರೆ. ಹಲವಾರು ಹಳ್ಳಿಗಳಲ್ಲಿ ಕುಡಿಯಲು ನೀರೂ ಸಹ ಇಲ್ಲ. ಟ್ಯಾಂಕರ್ನಿಂದ ಕುಡಿಯುವ ನೀರನ್ನ ಸರಬರಾಜು ಮಾಡುವ ಸ್ಥಿತಿಗೆ ಜಿಲ್ಲೆಯನ್ನ ಈ ಮಹಾನುಭಾವರು ತಂದಿದ್ದಾರೆ ಎಂದು ಮೊದಲು ಹೆಸರು ಹೇಳದೆ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ನಿಂತುಕೊಳ್ಳಿ : ನಿಮ್ಮ ಮುಖೇನ ನನ್ನದು ಪ್ರಶ್ನೆ ಮಹಾನಾಯಕರೇ, ನಿಮ್ಮ ಒಂದು ವ್ಯಕ್ತಿತ್ವದ ಮೇಲೆ ನಿಮಗೆ ಇಷ್ಟೊಂದು ಗರ್ವ ಇದ್ದರೆ ಭಾರತೀಯ ಜನತಾ ಪಕ್ಷದ ಒಂದು ಗುರುತನ್ನ ಬಿಟ್ಟು, ಚಿನ್ಹೆಯನ್ನ ಬಿಟ್ಟು, ಪಕ್ಷೇತರ ಅಭ್ಯರ್ಥಿಯಾಗಿ ನಿಂತುಕೊಳ್ಳಿ. ನಾವೂ ಪಕ್ಷೇತರವಾಗಿ ನಿಲ್ಲುತ್ತೇವೆ. ಆಗ ಜನ ಯಾರನ್ನ ಆಶೀರ್ವಾದ ಮಾಡುತ್ತಾರೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದರು.
ಇಷ್ಟು ದಿನ ಸನ್ಮಾನ್ಯ ನರೇಂದ್ರ ಮೋದಿಯವರ ಹೆಸರಿನಲ್ಲಿ ತಾವು ಗೆದ್ದದ್ದು. ಮನುಷ್ಯನಿಗೆ ಆತ್ಮವಿಶ್ವಾಸವಿರಬೇಕೇ ವಿನಃ ಗರ್ವ, ಅಹಂಕಾರ ಇರಬಾರದು. ನಿಮ್ಮಲ್ಲಿ ಅಷ್ಟೊಂದು ಆತ್ಮವಿಶ್ವಾಸ ಇದ್ದದ್ದೇ ಆದರೆ ಬನ್ನಿ. ಪಕ್ಷೇತರರಾಗಿ ಸ್ಪರ್ಧಿಸೋಣ. ಜನ ಯಾರ ಹಿಂದೆ ಇದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ. ಆಗ ಪಕ್ಷದ ಕಾರ್ಯಕರ್ತರು ಯಾರ ಜೊತೆಗಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಇವತ್ತು ಪಕ್ಷದ ಕಾರ್ಯಕರ್ತರ ಒತ್ತಾಸೆಯನ್ನ ಸಹ ಕಡೆಗಣಿಸಲಾಗಿದೆ. ಜನರ ಅಭಿಪ್ರಾಯವನ್ನ ಸಹ ಕಡೆಗಣಿಸಲಾಗಿದೆ ಅಂದ್ರೆ ಇಷ್ಟೇ ತಿಳ್ಕೋಬೇಕು. ಇವರ ತೋಳ್ಬಲದ ಮತ್ತು ಹಣಬಲದ ಶಕ್ತಿ ಎಷ್ಟಿದೆ ಅಂತ ಎಂದು ವಾಗ್ದಾಳಿ ನಡೆಸಿದರು.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದೇನೆ: ಇವತ್ತು ಸಮಾಜದ ಶಕ್ತಿ ತೋರಿಸಬೇಕಾಗಿದೆ. ಸಮಾಜದ ಹಿತ ಕಾಯಬೇಕಾಗಿದೆ. ಜಿಲ್ಲೆಯ ಸ್ವಾಭಿಮಾನಕ್ಕಾಗಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾನು ಜಿಲ್ಲೆಯ ಜನರನ್ನ ಪ್ರತಿನಿಧಿಸುವುದಕ್ಕೋಸ್ಕರ, ಅವರ ಹಿತಕ್ಕಾಗಿ, ಅವರ ಸ್ವಾಭಿಮಾನಕ್ಕಾಗಿ ಭಾರತೀಯ ಜನತಾ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದೇನೆ ಎಂದು ಘೋಷಿಸಿದರು.
ಮುಂದುವರೆದು ಮಾತನಾಡುತ್ತ ಪಕ್ಷದ ಹಿರಿಯರಲ್ಲಿ ನನ್ನ ಒಂದೇ ಒಂದು ಕೋರಿಕೆ, ಅಭ್ಯರ್ಥಿ ಬದಲಾವಣೆ ಮಾತ್ರ ಇದಕ್ಕೆ ಪರಿಹಾರ. ಅಭ್ಯರ್ಥಿ ಬದಲಾವಣೆಯಾಗದೇ ಇದ್ದರೆ ನಮ್ಮ ನಿರ್ಧಾರ ಅಚಲವಾಗಿರುತ್ತದೆ. ಜನರ ಹಿತಕ್ಕಾಗಿ, ಜನರ ಸ್ವಾಭಿಮಾನಕ್ಕಾಗಿ, ವಿಜಯಪುರ ಜನರ ಸಮಗ್ರ ಅಭಿವೃದ್ಧಿಗಾಗಿ ನಾನು ಬದ್ಧನಾಗಿ, ನಾನು ಈ ಕಣದಲ್ಲಿ ಸ್ಪರ್ಧೆ ಮಾಡೋದು ಮಾತ್ರ ಶತಃಸಿದ್ಧ ಎಂದು ಹೇಳಿದರು.
ಜಿಲ್ಲೆಯಲ್ಲಿ ಯಾರು ಕೆಲವರು ಏನು ತಮ್ಮನ್ನು ತಾವು ಮಹಾನ್‌ನಾಯಕರು ಎಂದು ಬಿಂಬಿಸಿಕೊಳ್ಳುತ್ತಾರೋ, ಒಳಒಪ್ಪಂದದಿಂದ ಇಲ್ಲಿಯವರೆಗೂ ಯಾರು ಚುನಾವಣೆಗಳನ್ನ ಗೆಲ್ಲುತ್ತಾ ಬಂದಿದ್ದಾರೋ, ಯಾರು ಪಕ್ಷದ ಹಿತಾಸಕ್ತಿಯನ್ನ ಕಡೆಗಣಿಸಿದ್ದಾರೋ. ಪಕ್ಷಕ್ಕೆ ಯಾರು ಪೂರಕವಾಗಿ ಇನ್ನೂ ನಡೆದೇ ಇಲ್ಲವೋ, ಚುನಾವಣೆ ಬಂದಾಗ ಮಾತ್ರ ಇವರಿಗೆ ಪಕ್ಷ ನೆನಪಾಗುತ್ತದೆ, ಪಕ್ಷದ ಕಾರ್ಯಾಲಯ ನೆನಪಾಗುತ್ತದೆ ಎಂದರು.
ಕಾರ್ಯಕರ್ತರೇ ಸರಿಯಾದ ಉತ್ತರವನ್ನ ಕೊಡುತ್ತಾರೆ: ಸಂಘ ಪರಿವಾರ ಅನ್ನೋದು ಯಾವುದೂ ಲೆಕ್ಕಕ್ಕಿಲ್ಲ ಇವರಿಗೆ. ಸಂಘ ಪರಿವಾರ ಇವರ ಚುನಾವಣೆ ಗೆಲ್ಲಿಸುವುದಕ್ಕೆ ಬರಬೇಕು. ಆದರೆ ಪರಿವಾರದ ಯಾವುದೇ ಕಾರ್ಯಕ್ರಮದಿಂದ ಮಾತ್ರ ಇವರು ದೂರ. ಇಂತಹ ವ್ಯಕ್ತಿಗಳೇ ನಮ್ಮ ಟಿಕೆಟ್ ಇಂದು ತಪ್ಪಿಸಲು ಕಾರಣೀಭೂತರಾಗಿದ್ದಾರೆ. ಅಂಥವರಿಗೆ ಜನರು, ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ ಅಂತ ಅನ್ನುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.
ಅಂಥವರ ಯಾರು ಹೆಸರು ಹೇಳಲು ಹಿಂಜರಿಕೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ನನಗ್ಯಾವ ಹಿಂಜರಿಕೆಯೂ ಇಲ್ಲ, ಹೆದರಿಕೆಯೂ ಇಲ್ಲ. ಸನ್ಮಾನ್ಯ ರಮೇಶ ಜಿಗಜಿಣಗಿ ಅಂತ ಖಂಡಿತವಾಗಿ ಹೇಳುತ್ತೇನೆ ಎಂದರು. ಇನ್ನು ವ್ಯವಸ್ಥಿತವಾಗಿ ಬಂಜಾರಾ ಸಮುದಾಯವನ್ನ ಸಹ ರಾಜಕೀಯವಾಗಿ ಮುಗಿಸುವಂತಹ ಷಡ್ಯಂತ್ರ ಸಹ ದಶಕಗಳಿಂದ ಆಗುತ್ತಾ ಇದೆ. ಮೂರು ಬಾರಿ ನಮ್ಮ ಸಮಾಜದ ಪ್ರಕಾಶ್ ರಾಠೋಡ ಅವರನ್ನು ಸಹ ಆ ಪಕ್ಷದವರು (ಕಾಂಗ್ರೆಸ್ʼನವರು ಮುಗಿಸಿದರು) ಮಣ್ಣು ಕೊಟ್ಟರು. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ನಾಗಠಾಣ ಮತಕ್ಷೇತ್ರದಿಂದ ನಾವು, ನಮ್ಮಲ್ಲಿ (ಬಿಜೆಪಿಯಲ್ಲಿ) ಇಬ್ಬರು ಪ್ರಬಲ ಅಭ್ಯರ್ಥಿಗಳಿದ್ವಿ (ತಾವು ಮತ್ತು ಮಹೇಂದ್ರಕುಮಾರ ನಾಯಕ್), ಇಬ್ಬರನ್ನೂ ಸಹ ಕಡೆಗಣಿಸಿ, ಕೊನೆಕ್ಷಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ಗೊತ್ತಿರದಂತಹ ಅಭ್ಯರ್ಥಿಗೆ ಟಿಕೆಟ್ ನೀಡಿದಂತಹ ಮಹಾನುಭಾವರು ಇವರು ಎಂದು ತಿಳಿಸಿದರು.
ಈ ಬಾರಿ ಸಹ ಅದೇ ರೀತಿ ಹೋಗ್ತಾ ಇದ್ದಾರೆ. ಇನ್ನು ನಾವು ತಾಳ್ಮೆ ವಹಿಸಿಕೊಂಡು ಸುಮ್ಮನಿರುವ ಜನ ಅಲ್ಲ. ಕ್ಷತ್ರಿಯರು, ವಿಜಯಪುರದ ಜನತೆ ಶಾಂತಿಪ್ರಿಯರು. ಹಾಗಂತ ಅದು ದೌರ್ಬಲ್ಯವಲ್ಲ. ಜನ ಇವತ್ತು ನಿಮ್ಮ ಷಡ್ಯಂತ್ರವನ್ನ ಅರ್ಥ ಮಾಡ್ಕೊಂಡಿದ್ದಾರೆ. ನಿಮ್ಮ ಸ್ವಾರ್ಥವನ್ನ ಅರ್ಥ ಮಾಡ್ಕೊಂಡಿದ್ದಾರೆ. ನಿಮ್ಮ ಅಧಿಕಾರದ ದಾಹವನ್ನ ಅರ್ಥ ಮಾಡ್ಕೊಂಡಿದ್ದಾರೆ. ನಿಮಗೆ ಉತ್ತರ ನೀಡಲು ಜನ ಸನ್ನದ್ಧರಾಗಿದ್ದಾರೆ. ಬರುವ ದಿನಗಳಲ್ಲಿ ಸರಿಯಾದ ಉತ್ತರ ಕೊಡುತ್ತಾರೆ. ಧಮ್ಮಿದ್ರೆ, ತಾಕತ್ತಿದ್ರೆ ಭಾರತೀಯ ಜನತಾ ಪಕ್ಷದ ಗುರುತನ್ನ ಹೊರತುಪಡಿಸಿ, ಪಕ್ಷೇತರರಾಗಿ ಬನ್ನಿ. ನಾವು ನಮ್ಮ ಶಕ್ತಿಯನ್ನ ತೋರಿಸುತ್ತೇವೆ ಎಂದು ಸ್ವಪಕ್ಷೀಯ ಸಂಸದ, ಹಾಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ವಿರುದ್ಧ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಬಾಬು ರಾಜೇಂದ್ರ ನಾಯಕ್ ಸವಾಲು ಹಾಕಿದರು.
ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಜಿಲ್ಲೆಯನ್ನ ಬಲಿ ಕೊಡ್ತಾ ಇದ್ದಾರೆ: ಖಂಡಿತವಾಗಿಯೂ ಸರ್ವೇ ರಿಪೋರ್ಟುಗಳನ್ನ ಬಹಿರಂಗಪಡಿಸಲಿ. ಅಲ್ಲಿ ಯಾರ ಹೆಸರಿತ್ತು ಅನ್ನೋದು ಗೊತ್ತಾಗುತ್ತೆ. ಜನ ಯಾರ ಜೊತೆಗಿದ್ದಾರೆ? ಪಕ್ಷದ ಕಾರ್ಯಕರ್ತರು ಯಾರ ಜೊತೆಗಿದ್ದಾರೆ? ಪರಿವಾರದ ಸ್ವಯಂ ಸೇವಕರು ಯಾರ ಜೊತೆಗಿದ್ದಾರೆ ಅನ್ನೋದು ಆಗ ಗೊತ್ತಾಗುತ್ತೆ. ಬಹಿರಂಗ ಪಡಿಸಲಿ ಎಂದರು. ಸ್ವಾಮೀ ನಮ್ಮಲ್ಲಿ ಧನಬಲ ಇಲ್ಲ ಅಷ್ಟೇ. ನಮ್ಮಲ್ಲಿ ಜನ ಇದ್ದಾರೆ. ನಮ್ಮಲ್ಲಿ ರಾಜಕೀಯ ಷಡ್ಯಂತ್ರದ ನರಿಬುದ್ಧಿ ಇಲ್ಲ. ಜನರ ಆಶೀರ್ವಾದ ಇದೆ. ಸ್ವಾರ್ಥಕ್ಕಾಗಿ ಟಿಕೆಟ್ ಅನ್ನು ತಪ್ಪಿಸಿದ್ದಾರೆ. ಜಿಲ್ಲೆಯ ದೇಶದ ಹಿತವನ್ನು ಕಡೆಗಣಿಸಿ, ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಜಿಲ್ಲೆಯನ್ನ ಬಲಿ ಕೊಡ್ತಾ ಇದ್ದಾರೆ ಅನ್ನುವ ಮಾತನ್ನು ಹೇಳಬಲ್ಲೆ ಎಂದರು.
ಇದನ್ನೂ ಓದಿ : ಪ್ರಧಾನಿ ಮೋದಿಗೆ ಹೇಗೆ ದೈವಿಶಕ್ತಿ ಇದೆಯೋ ವಿಜಯಪುರದಲ್ಲಿ ಜಿಗಜಿಣಗಿಗೂ ದೈವಿ ಶಕ್ತಿ ಇದೆ: ಸಂಸದ ರಮೇಶ್ ಜಿಗಜಿಣಗಿ