ಬೆಳಗಾವಿ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ರಾಜ್ಯರ ಎರಡು ಕಣ್ಣುಗಳು. ಇಬ್ಬರೂ ಕೂಡ ಬಹಳ ಒಗ್ಗಟ್ಟಾಗಿದ್ದು, ಬಿಜೆಪಿಯವರು ಇಬ್ಬರು ನಾಯಕರ ನಡುವೆ ಹುಳಿ ಇಂಡುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಎನೂ ಅರ್ಥ ಇಲ್ಲ'' ಎಂದು ಶಾಸಕ ಎನ್.ಹೆಚ್. ಕೋನರೆಡ್ಡಿ ಕಿಡಿಕಾರಿದರು.
ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಬಿಜೆಪಿ ನಾಯಕರಲ್ಲೇ ಎಲ್ಲವೂ ಸರಿ ಇಲ್ಲ. ಶಾಸಕ ಯತ್ನಾಳ್, ಪ್ರತಿಪಕ್ಷ ನಾಯಕ ಅಶೋಕ್ ನಡುವೆ ಸರಿ ಇಲ್ಲ. ಮೊದಲು ಅವರ ಮನೆ ರಿಪೇರಿ ಮಾಡಿಕೊಂಡು ನಮ್ಮ ಬಗ್ಗೆ ಹೇಳಲಿ. 135 ಶಾಸಕರು ಇರುವ ಒಳ್ಳೆಯ ಸರ್ಕಾರ ನಮ್ಮದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಯಾವುದೂ ಚರ್ಚೆ ಇಲ್ಲ. ನಮ್ಮ ಮನೆ ಶುದ್ಧವಿದೆ. ಅದನ್ನು ಒಡೆಯುವ ಕೆಲಸ ನೀವು ಮಾಡಬೇಡಿ. ಮೊದಲು ನಿಮ್ಮ ಬಿಜೆಪಿ ಮನೆ ಶುದ್ಧ ಮಾಡಿಕೊಂಡು ನಮ್ಮ ಬಗ್ಗೆ ಮಾತಾಡಿ'' ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಶಾಸಕ ಎನ್. ಹೆಚ್. ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
''ಸಿಎಂ ಬದಲಾವಣೆ ಆಗುತ್ತೆ, ಸರ್ಕಾರ ಉರುಳುತ್ತೆ ಎಂಬ ಚರ್ಚೆಗೆ ನಮ್ಮ ಸರ್ಕಾರ ಐದು ವರ್ಷ ಗಟ್ಟಿಮುಟ್ಟಾಗಿ ಇರುತ್ತದೆ. ಮುಂದೆಯೂ ನಮ್ಮದೇ ಸರ್ಕಾರ ಬರುತ್ತದೆ. ಇತಿಹಾಸದಲ್ಲಿ ಕೋನರೆಡ್ಡಿ ಹೇಳಿದ್ದು ಸತ್ಯವಾಗಿರುತ್ತದೆ ಅಂತಾ ಹೇಳುತ್ತಾರೆ. ನಮ್ಮದೇ ಸರ್ಕಾರ ಬರುತ್ತದೆ ಬೇಕಾದರೆ ಬರೆದು ಇಟ್ಟುಕೊಳ್ಳಿ'' ಎಂದು ಶಾಸಕ ಕೋನರೆಡ್ಡಿ ಭವಿಷ್ಯ ನುಡಿದರು.
''ನೀವು ಯಾಕೆ ಕನಸು ಕಾಣುತ್ತಿರಿ, ನಮ್ಮ ಪಕ್ಷ, ಹೈಕಮಾಂಡ್ ಇದೆ. ವಿಜಯೇಂದ್ರ ಹೇಳಿಕೆ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ರಮೇಶ್ ಜಾರಕಿಹೊಳಿ, ಯತ್ನಾಳ್, ವಿಜಯೇಂದ್ರ ನಾಯಕತ್ವ ಒಪ್ಪಲ್ಲ ಎಂದಿದ್ದಾರೆ. ನೀವು ಒಬ್ಬರಿಗೊಬ್ಬರು ಒಪ್ಪಿಕೊಳ್ಳದವರು ನಮ್ಮ ಬಗ್ಗೆ ಏನು ಮಾತಾಡುತ್ತಿರಿ'' ಎಂದು ಕೋನರೆಡ್ಡಿ ವಾಗ್ದಾಳಿ ಮಾಡಿದರು.
''ಮುಡಾ ವಿರುದ್ಧ ಬಿಜೆಪಿ ನಾಯಕರ ಹೋರಾಟದ ಬಗ್ಗೆ ನಾವು 135 ಶಾಸಕರಿದ್ದು, ನಮಗೂ ರಾಜಕಾರಣ ಗೊತ್ತಿದೆ. ಅವರನ್ನು ನಾವು ನೋಡಿಕೊಳ್ಳುತ್ತೇವೆ'' ಎಂದ ಕೋನರೆಡ್ಡಿ, ''ಕಾಂಗ್ರೆಸ್ ಪಾದಯಾತ್ರೆ ಏನಾದರೂ ಮಾಡುತ್ತಾ ಎಂಬ ಪ್ರಶ್ನೆಗೆ ಅವಶ್ಯಕತೆ ಬಿದ್ದರೆ ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟುವಿಗೆ ನಾವೂ ಪಾದಯಾತ್ರೆ ಮಾಡುತ್ತೇವೆ. ಕೇಂದ್ರ ಸರ್ಕಾರ ನಮಗೆ ಬಜೆಟ್ನಲ್ಲಿ ಚಂಬು ಕೊಟ್ಟಿದೆ. ಅದನ್ನು ನೋಡಿಕೊಂಡು ಕರ್ನಾಟಕದ ಜನ ಕುಳಿತಿದ್ದೇವೆ. ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಕೊಟ್ಟ ಹಾಗೆ ನಮಗೆ ಯಾಕೆ ಅನುದಾನ ಕೊಟ್ಟಿಲ್ಲ. ಇದರ ಬಗ್ಗೆ ಬಿಜೆಪಿಯವರು ಪಾದಯಾತ್ರೆ ಮಾಡಲಿ. ಖಾಲಿ ಕುಳಿತು ಬಿಜೆಪಿಯವರ ಕಾಲು ಹಿಡಿದುಕೊಂಡಿವೆ. ಸ್ವಲ್ಪ ನಡೆದಾಡಲು ಹೋಗುತ್ತಿದ್ದಾರೆ. ಹೋಗಲಿ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಬಿಜೆಪಿಯವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ: ಸಚಿವ ಜಿ. ಪರಮೇಶ್ವರ್ - G Parameshwara