ಮಂಗಳೂರು: ''ಚನ್ನಪಟ್ಟಣಕ್ಕೆ ನಾನು ಏನೂ ಮಾಡಿಲ್ಲವೆಂದು ಕುಮಾರಸ್ವಾಮಿಯವರಿಗೇನು ಗೊತ್ತು. ಅವರು ಚನ್ನಪಟ್ಟಣ ನೋಡುವುದಕ್ಕೆ ಮೊದಲೇ ನಾನು ನೋಡಿದ್ದೇನೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕುಮಾರಸ್ವಾಮಿ ಬಹಳ ತಡವಾಗಿ ರಾಜಕೀಯಕ್ಕೆ ಬಂದವರು. ನಾನು 1985ಕ್ಕೆ ಲೋಕಸಭಾ ಚುನಾವಣೆ ಎದುರಿಸಿದವನು. ಅವರು 1995ರ ಬಳಿಕ ರಾಜಕೀಯ ಪ್ರವೇಶಿಸಿದವರು. ಅವರಿಗಿಂತ 10ವರ್ಷಕ್ಕಿಂತ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು'' ಎಂದು ಹೇಳಿದರು.
''ಚನ್ನಪಟ್ಟಣ ಉಪಚುನಾವಣೆ ಬಗ್ಗೆ ನನ್ನ ತಮ್ಮ ಡಿ.ಕೆ. ಸುರೇಶ್ಗೆ ಆಸಕ್ತಿಯಿಲ್ಲ. ಜನರು ನಮಗೆ ರೆಸ್ಟ್ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ, ಪಾರ್ಟಿ ಕೆಲಸ ಮಾಡಬೇಕೆಂಬ ಆಸೆಯಿದೆ. ನಮಗೆ 85 ಸಾವಿರ ಮಂದಿ ಮತ ಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರನ್ನು ಬಿಡುವುದಕ್ಕೆ ಆಗೋಲ್ಲ. ದೇವರು ನಮಗೆ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ. ಅದನ್ನು ಉಳಿಸಬೇಕು. ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಎಂಬ ಭಾವನೆಯಿದೆ. ಅವರಿಗೆ ಅಳಿಲು ಸೇವೆ ಮಾಡೋಣ ಎಂದು ಇದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಮಾಡಿದ್ದೇವೆ. ಇದೀಗ ಸರಿಯಾದ ಸಮಯ, ಏನೋ ಸಹಾಯ ಮಾಡೋಣ ಎಂದಿದ್ದೇವೆ'' ಎಂದರು.
ಹೆಚ್ಚುವರಿ ಡಿಸಿಎಂ ಹುದ್ದೆ ಕೇಳುವ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ನೀವು ದಿನಾಲೂ ನ್ಯೂಸ್ ಮಾಡುತ್ತೀರಲ್ಲ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರನ್ನು ನಾನೇಕೆ ಬೇಡ ಅನ್ನಲಿ. ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಾರ್ಟಿ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತದೆ'' ಎಂದು ತಿಳಿಸಿದರು.
ನನ್ನ ಮೇಲಿನ ದ್ವೇಷಕ್ಕೆ ಬಳ್ಳಾರಿಯಲ್ಲಿ ರಾಜ್ಯ ಸರ್ಕಾರ ಮೈನಿಂಗ್ಗೆ ಅನುಮತಿ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ''ಮೈನಿಂಗ್ ಬಗ್ಗೆ ಹೆಚ್‌ಡಿಕೆಗೆ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ನನಗಂತೂ ಏನೂ ಗೊತ್ತಿಲ್ಲ'' ಎಂದು ಹೇಳಿದರು.
ಕುಕ್ಕೆ ಸುಬ್ರಹ್ನಣ್ಯ ಕ್ಷೇತ್ರಕ್ಕೆ ಆಗಮಿಸಿರುವ ಬಗ್ಗೆ ಮಾತನಾಡಿದ ಡಿಕೆಶಿ, ''ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆ. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಇಂದು ಕುಟುಂಬ ಸಹಿತ ಹೋಗುತ್ತಿದ್ದೇನೆ'' ಎಂದು ತಿಳಿಸಿದರು.