ರಾಯಚೂರು: "ನಮ್ಮ ಸರ್ಕಾರದ ಶಕ್ತಿಯನ್ನು ನಿಮಗೆ ಧಾರೆ ಎರೆಯುತ್ತಿದ್ದೇವೆ. ನಿಮಗೆ ಉಪಕಾರದ ಸ್ಮರಣೆ ಇರಬೇಕು" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
"ಗ್ಯಾರಂಟಿ ಯೋಜನೆಯಿಂದ ನೀವೂ ಸಂತೋಷದಿಂದ ಇದ್ದೀರಿ. ನುಡಿದಂತೆ ನಡೆದಿರುವ ಸರ್ಕಾರ ನಮ್ಮದು. ಬಿಜೆಪಿಯವರು ಬೇಕಾದಷ್ಟು ಮಾತು ಕೊಟ್ಟಿದ್ರು, ಜನಧನ್ ಅಕೌಂಟ್ ಓಪನ್ ಮಾಡಿದ್ರೆ 15 ಲಕ್ಷ ಅಂತ ಹೇಳಿದ್ರು, ನಾಲ್ಕು ವರ್ಷ ಬಿಜೆಪಿ ಸರ್ಕಾರ ಇತ್ತು. ಒಂದು ಯೋಜನೆ ಜಾರಿ ಮಾಡಲಿಲ್ಲ. ನೀರು ಕೊಡಲಿಲ್ಲ, ತೆರಿಗೆಯೂ ಕೊಡಲಿಲ್ಲ, ಅನ್ನ ಕೊಡಲಿಲ್ಲ, ಸೂರು ಕೊಡಲಿಲ್ಲ, ಅಚ್ಛೇ ದಿನವೂ ಬರಲಿಲ್ಲ, ಇನ್ನೂ ಏತಕ್ಕೆ ಬರುತ್ತಿದ್ದಾರೋ ನನಗೆ ಗೊತ್ತಿಲ್ಲ" ಎಂದು ಬಿಜೆಪಿಯನ್ನು ಟೀಕಿಸಿದರು.
"ಕಮಲ ಕೆರೆಯಲ್ಲಿ ಇದ್ರೆ ಚೆಂದ, ತೆನೆ ಹೊಲದಲ್ಲಿ ಇದ್ರೆ ಚೆಂದ, ಈ ದಾನ - ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದದ್ದಕ್ಕೆ ಗ್ಯಾರಂಟಿ ಜಾರಿಗೆ ಅನುಕೂಲವಾಯ್ತು" ಎಂದು ಕವನ ವಾಚಿಸಿದರು.
"ರಾಯಚೂರು ಇದೊಂದು ಶಕ್ತಿಯ ಭೂಮಿ. ಇದು ಚಿನ್ನದ ನಾಡು, ನೀವು ಕೊಟ್ಟಂತಹ ಶಕ್ತಿಯಿಂದ ಈ ಭಾಗಕ್ಕೆ ಪ್ರಜಾಧ್ವನಿ ಯಾತ್ರೆಗೆ ಬಂದಿದ್ದೆವು. ಮಲ್ಲಿಕಾರ್ಜುನ ಖರ್ಗೆ ಮುಖಂಡತ್ವದಲ್ಲಿ ಗಾಂಧಿ ಬಾವಿಗೆ ಹೋಗಿ ನೀರು ತೆಗೆದು ಹೊರಗೆ ಚೆಲ್ಲಿದ್ದೆವು. 200 ಯೂನಿಟ್ವರೆಗೆ ವಿದ್ಯುತ್ ಕೊಡಬೇಕು ಎಂದು ಅಂದು ಪ್ರಜಾ ಧ್ವನಿಯಾತ್ರೆ ದಿನ ಘೋಷಣೆ ಮಾಡಿದ್ದೆವು. ಇಂದಿರಾಗಾಂಧಿ ಮೊಮ್ಮಗಳಾದ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ತಿಂಗಳಿಗೆ 2000 ರೂಪಾಯಿ ಕೊಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು. ಮನೆಯ ರೇಷನ್ಗೆ, ಎಣ್ಣೆಗೆ, ಗ್ಯಾರಂಟಿ ಚೆಕ್ಗೆ ಅಂದೇ ನಮ್ಮ ಹಾಗೂ ಸಿದ್ಧರಾಮಯ್ಯ ಕೈಲಿ ಸಹಿ ಮಾಡಿಸಿ ಮನೆ ಮನೆಗೆ ಹಂಚಿದ್ದೆವು. ಇವತ್ತು ಆ ಚೆಕ್ ಜಾರಿಯಾಗಿ, ಅನುಷ್ಠಾನಕ್ಕೆ ಬಂದಿದೆ. ಇವತ್ತು ಐದು ಗ್ಯಾರಂಟಿಗಳು ಜಾರಿಯಾಗಿವೆ" ಎಂದರು.
"ಸಚಿವ ಸಂಪುಟದ ಹತ್ತು ಸಚಿವರು ಸೇರಿ, ಮೊದಲನೇ ಸಚಿವ ಸಂಪುಟದಲ್ಲಿ ಐದೂ ಗ್ಯಾರಂಟಿ ಜಾರಿಗೆ ತರಬೇಕು ಎಂದು ನಿರ್ಧರಿಸಿದ್ದೆವು. ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆಯವರು. ಈ ಬಗ್ಗೆ ನಿಮಗೆಲ್ಲ ಉಪಕಾರ ಸ್ಮರಣೆ ಇರಬೇಕು" ಎಂದು ತಿಳಿಸಿದರು.
"ನೀರಾವರಿ ಇಲಾಖೆಯಲ್ಲಿ ಬಂಗಾರಪ್ಪನವರ ಸಂಪುಟದಲ್ಲಿ ನಾನು ಸಚಿವನಾಗಿದ್ದಾಗ, ಜನ ಸೇವೆಗಾಗಿ 210 ಕೋಟಿಗೂ ಅಧಿಕ ಹಣದಲ್ಲಿ ಬಂಗಾರಪ್ಪನ ಕೆರೆ ಅಭಿವೃದ್ಧಿ ಮಾಡಿಸಿದೆವು. ಮೈನರ್ ಇರಿಗೇಷನ್ ಅಡಿಯಲ್ಲಿ 107 ಕೋಟಿ ರೂ. ನಲ್ಲಿ ಚೆಕ್ ಡ್ಯಾಂ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿಕೊಂಡು ಬರಬೇಕು" ಎಂದರು.
"ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ನಾವೇನಾದರೂ ಯೋಜನೆಗಳನ್ನು ಒಂದೇ ಜಾತಿ ಒಂದೇ ಧರ್ಮಕ್ಕೆ ಕೊಡ್ತಿದೇವಾ..? ಸರ್ವರಿಗೂ ಕೊಡ್ತಿದ್ದೇವೆ. ಈ ಐದು ಬೆರಳು ಸೇರಿದ್ರೆ ಕೈ ಮುಷ್ಠಿಯಾಯಿತು. ಕೈ ಮುಷ್ಠಿಯಾಗಿ ಗ್ಯಾರಂಟಿಯಾಯ್ತು. ಮುಂದೆಯೂ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ" ಎಂದು ಭವಿಷ್ಯ ನುಡಿದರು.
"ಇಡೀ ದೇಶದಲ್ಲಿ ಇವತ್ತು ಬದಲಾವಣೆ ಬರುತ್ತಿದೆ. ತುಂಗಭದ್ರಾ ನದಿಯಿಂದ ನವಲಿ ಜಲಾಶಯ ನಿರ್ಮಾಣಕ್ಕೆ, ಆಂಧ್ರ, ತೆಲಂಗಾಣ ಜೊತೆ ಮಾತುಕತೆ ನಡೆಯುತ್ತಿದೆ. ಚುನಾವಣೆ ಬಳಿಕ ಅದನ್ನೂ ಮಾಡಿ ಮುಗಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲಿಸುವ ಮೂಲಕ ಬದಲಾವಣೆ ತನ್ನಿ" ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಡಿಸಿಎಂ ಭಾಷಣ ವೇಳೆ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಏಮ್ಸ್ ಬಾವುಟವನ್ನು ಪ್ರದರ್ಶಿಸಿದರು. ಈ ವೇಳೆ ಸಚಿವರಾದ ಎನ್.ಎಸ್.ಬೋಸರಾಜು, ಡಾ.ಶರಣಪ್ರಕಾಶ್ ಪಾಟೀಲ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಪಿಎಸ್ಐ ಹಗರಣ ತನಿಖೆಗೆ ಎಸ್ಐಟಿ, ವಿಧಾನಸೌಧದ ಬಳಿ ಭುವನೇಶ್ವರಿ ಪ್ರತಿಮೆ: ಮೆಟ್ರೋ 3ನೇ ಹಂತಕ್ಕೆ ಸಂಪುಟ ಸಭೆ ಒಪ್ಪಿಗೆ