ಚಿಕ್ಕಮಗಳೂರು: ಕೆಲ ದಿನಗಳಿಂದ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಬಿಡುವು ನೀಡಿದ್ದ ವರುಣದೇವ ಮತ್ತೆ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಅಬ್ಬರಿಸಿದ್ದಾನೆ. ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ, ಕಗ್ಗನಳ್ಳ, ಮಹಲ್ಗೋಡು ಸುತ್ತಮುತ್ತ ಮಳೆ ಅಬ್ಬರಿಸುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಹಲ್ಗೋಡ್ ಸಮೀಪ ಹಳ್ಳ ಉಕ್ಕಿ ಹರಿಯುತ್ತಿದೆ.
ಹಳ್ಳ ತುಂಬಿದ್ದರಿಂದ ನೀರಿನ ರಭಸ ಕೂಡ ಹೆಚ್ಚಾಗಿದ್ದು, ಬಾಳೆಹೊನ್ನೂರು-ಕಳಸ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯ ಕಾರಣ ಪಂಚವಟಿ ಎಸ್ಟೇಟ್ನ ಕೆಲ ಮನೆಗಳಿಗೆ ನೀರು ನುಗ್ಗಿದೆ. ಸತತ ಒಂದೂವರೆ ಗಂಟೆ ಸುರಿದ ಭಾರಿ ಮಳೆಗೆ ಜನ ತತ್ತರಿಸಿದ್ದಾರೆ.
ಇನ್ನು, ಕಳಸ ಹಾಗೂ ಎನ್.ಆರ್ ಪುರ ತಾಲೂಕಿನ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಆರ್ಭಟಿಸುತ್ತಿದೆ. ಈ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದರಿಂದ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು. ಮಳೆ ಬಂದು ಹೋಗಿರುವ ಕಾರಣ ಈ ಭಾಗದ ನೈಸರ್ಗಿಕ ಪ್ರವಾಸಿ ತಾಣಗಳು ಹಸಿರಿನಿಂದ ಕಂಗೊಳಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈಗ ಮತ್ತೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಪಾತಗಳು ಮೈದುಂಬಿ ಹರಿಯುತ್ತಿವೆ.