ಬೆಂಗಳೂರು: ಹೊಸದಾಗಿ ಆಯ್ಕೆಯಾದ 1000 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣಪತ್ರ ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ಗಳನ್ನು ಕಂದಾಯ ಸಚಿವ ಸಚಿವ ಕೃಷ್ಣಬೈರೇಗೌಡ ಅವರು ವಿತರಣೆ ಮಾಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಭೂಮಾಪನ, ಕಂದಾಯ ಆಯುಕ್ತಾಲಯ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣಪತ್ರ ವಿತರಣೆ ಮಾಡಿ ಮಾತನಾಡಿದ ಸಚಿವರು, ಜನರಿಗೆ ಉತ್ತಮ ಸೇವೆ ಸಿಗಲಿ. ಮುಖ್ಯವಾಗಿ ಲೈಸನ್ಸ್ ನೀಡಿದ್ದೇವೆ. 991 ಡಿಜಿಟಲ್ ನೇಮಕಾತಿ ಪತ್ರ ನೀಡಿದ್ದೇವೆ. ವಿಐಗಳಿಗೆ ಲ್ಯಾಪ್‍ಟಾಪ್ ನೀಡುವುದಕ್ಕೆ ಸಿಎಂ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಇದಕ್ಕೆ ಇವತ್ತು ವಿದ್ಯುಕ್ತವಾಗಿ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಪ್ರತಿಯೊಂದು ಮನೆಗೆ ಕಂದಾಯ ಇಲಾಖೆ ಕೆಲಸ ಇದ್ದೇ ಇರುತ್ತದೆ. ಖಾತೆ, ಮಂಜೂರಾತಿ, ಜಾತಿ ಪ್ರಮಾಣಪತ್ರ ಸೇರಿದಂತೆ ಎಲ್ಲ ಹಂತಗಳಲ್ಲಿ ನೋಡಿದಾಗ ಕಂದಾಯ ಇಲಾಖೆಯನ್ನು ಜನರು ಅವಲಂಬಿಸಿದ್ದಾರೆ. ಎಲ್ಲಾ ಇಲಾಖೆಯ ಮಾತೃ ಇಲಾಖೆ ಕಂದಾಯ ಇಲಾಖೆ. ಜನಸೇವೆ ಮಾಡುವಾಗ ನೌಕರರಿಗೂ ಮಾತೃ ಹೃದಯ ಇರಲಿ ಎಂದರು.
ಕಂದಾಯ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೂ ಹೆಚ್ಚು ಬಾಕಿಯಿರುವ ಕೇಸ್ಗಳು ನಮ್ಮಲ್ಲಿ ಮಾತ್ರ. 2 ಕೋಟಿಯಷ್ಟು ಜನ ಪಹಣಿ ಹೊಂದಿಲ್ಲ. ಒಂದು ಕೋಟಿಯಷ್ಟು ಹೊಸ ಸರ್ವೆ ನಂಬರ್ ಬಾಕಿಯಿದೆ. ಲಕ್ಷಾಂತರ ಜನರಿಗೆ ಮಂಜೂರು ಮಾಡಿದ್ದರೂ, ಅವರಿಗೆ ಜಮೀನು ಕೊಟ್ಟಿಲ್ಲ. ಆಗಬೇಕಾದ ಕೆಲಸ ಜಾಸ್ತಿ ಇದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಹೆಚ್ಚು ದೂರುಗಳು ಬಂದಿವೆ. 700 ಕಿ.ಮೀ. ನಿಂದಲೂ ದೂರು ತೆಗೆದುಕೊಂಡು ಜನ ಬರುತ್ತಿದ್ದಾರೆ. ಜನಕ್ಕೆ ಶಾಶ್ವತ ಯೋಜನೆ ನಮ್ಮ ಮನಸ್ಸಿನಲ್ಲಿ ಇರಬೇಕು. ಯೋಜನೆ ಯಶಸ್ವಿಗೆ ಮಾನವ ಸಂಪನ್ಮೂಲ ಬೇಕು. ಬೇಕಾದ ಸಿಬ್ಬಂದಿಯನ್ನು ನಾವು ಹೊಂದಿಸಬೇಕು. ಯೋಜನೆ ಸಿಬ್ಬಂದಿ ಜೊತೆಗೆ 21ನೇ ಶತಮಾನದ ತಂತ್ರಜ್ಞಾನ ಬಳಸಿಕೊಂಡರೆ ಮಾತ್ರ ಗುರಿ ತಲುಪಲು ಸಾಧ್ಯ. ಆಗ ಮಾತ್ರ ಜನರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಸಚಿವರು ಅಭಿಪ್ರಾಯಪಟ್ಟರು.
ನಿಮ್ಮ ಇಲಾಖೆಯಲ್ಲಿ ಸಮಸ್ಯೆ ಇದೆ, ನಿಮಗೆ ಬೇಕಾದ ಎಲ್ಲ ಸಹಕಾರ ಕೊಡ್ತೀನಿ ಅಂತ ಸಿಎಂ ಸಹ ಹೇಳಿದ್ದಾರೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪಹಣಿಗಳಿಗೆ ಆಧಾರ್ ಲಿಂಕ್ ಹಾಗೂ ಆಸ್ತಿ ನೋಂದಣಿ ಹಂತದಲ್ಲೇ ಆಧಾರ್ ಪಡೆಯಲು ಆರಂಭ: ಸಚಿವ ಕೃಷ್ಣ ಬೈರೇಗೌಡ