ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾವ ಕಾರಣಕ್ಕಾಗಿ ಗಡ್ಡ ಬಿಟ್ಟಿದ್ದಾರೆ, ಯಾವಾಗ ಗಡ್ಡ ತೆಗೆಯುತ್ತಾರೆ ಎನ್ನುವ ಕುರಿತು ವಿಧಾನ ಪರಿಷತ್ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಗಡ್ಡ ಬಿಟ್ಟ ಉದ್ದೇಶ ಈಡೇರಲಿ ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಕಾಲೆಳೆದರೆ ನಿಮಗೇಕೆ ಗಡ್ಡದ ವಿಷಯ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು.
ವಿಧಾನ ಪರಿಷತ್ ಕಲಾಪದಲ್ಲಿ 2024-25 ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್, ಸರ್ಕಾರದ ಐದು ಗ್ಯಾರಂಟಿಗಳ ಪರಿಕಲ್ಪನೆ ನಮ್ಮ ಸಿಎಂ, ಡಿಸಿಎಂಗೆ ಹೇಗೆ ಬಂತು ಎನ್ನುವ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. 155 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ. 1.17 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ಕೊಡಲಾಗಿದೆ, ಉಚಿತ ಅಕ್ಕಿ ಬದಲು ಹಣ ಕೊಡಲಾಗಿದೆ. ವಿದ್ಯುತ್ ಬಿಲ್ ಕಟ್ಟುವಂತಿಲ್ಲ, ಪ್ರಪಂಚಲ್ಲೇ ಅದ್ವಿತೀಯ ಪ್ರಯೋಗ ಇದಾಗಿದೆ. ಈ ಚಿಂತನೆ ಹೇಗೆ ಬಂತು ಎಂದು ಎಲ್ಲರೂ ಯೋಚಿಸುವಂತಾಗಿದೆ, ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ನಿಮ್ಮ ಡಿಸಿಎಂ ಡಿಕೆ ಶಿವಕುಮಾರ್ಗೆ ಡಾಕ್ಟರೇಟ್ ಕೊಟ್ಟುಬಿಡಿ ಎಂದರು. ಆಗ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಡಿಸಿಎಂ ಡಿಕೆ ಶಿವಕುಮಾರ್ ಸಾಮರ್ಥ್ಯದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಎಲ್ಲಾ ಕಡೆ ಅವರು ಗಡ್ಡ ಯಾವಾಗ ತೆಗೆಯುತ್ತಾರೆ ಎನ್ನುವ ಚರ್ಚೆ ಆಗುತ್ತಿದೆ, ಯಾವುದೋ ಕಾರಣಕ್ಕಾಗಿ ಅವರು ಗಡ್ಡ ಬಿಟ್ಟಿದ್ದಾರೆ, ನಿರ್ದಿಷ್ಟ ಗುರಿ ಇರಿಸಿಕೊಂಡು ಗಡ್ಡ ತೆಗೆಯುವುದು ಮುಂದೂಡುತ್ತಿದ್ದಾರೆ. ಯಾವ ಉದ್ದೇಶಕ್ಕೆ ಗಡ್ಡ ಬಿಟ್ಟಿದ್ದಾರೋ ಆ ಉದ್ದೇಶ ಈಡೇರುತ್ತಾ? ನಿಗದಿತ ಸಮಯದಲ್ಲೇ ಈಡೇರುತ್ತಾ? ಅವರು ಗಡ್ಡ ತೆಗೆಯಲಿ ಎನ್ನುವುದು ನಮ್ಮ ಬಯಕೆ ಎಂದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ಸಚೇತಕ ರವಿಕುಮಾರ್, ಸಿಎಂ ಆದ ನಂತರ ಗಡ್ಡ ತೆಗೆಯಲಿದ್ದಾರೆ ಆದರೆ ಯಾವಾಗ ಸಿಎಂ ಆಗುತ್ತಾರೆ ಅನ್ನೋದು ಕುತೂಹಲ ಎಂದರು.
ಈ ವೇಳೆ ಮಾತನಾಡಿದ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ನಿಮಗ್ಯಾಕೆ ಗಡ್ಡದ ಚಿಂತೆ ಎಂದರು. ಬಳಿಕ ಕಾಂಗ್ರೆಸ್ ಸದಸ್ಯ ಉಮಾಶ್ರೀ, ಮೋದಿ ಗಡ್ಡ ಬಿಟ್ಟಿರುವ ವಿಷಯ ಪ್ರಸ್ತಾಪ ಮಾಡಿದರು. ನಂತರ ನಿಮಗೇಕೆ ಬೇಕು ಗಡ್ಡದ ವಿಷಯ ಕುಳಿತುಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಗಡ್ಡದ ಕುರಿತು ನಡೆದ ಸ್ವಾರಸ್ಯಕರ ಚರ್ಚೆಗೆ ತೆರೆ ಎಳೆದರು.
ನಂತರ ಮಾತು ಮುಂದುವರೆಸಿದ ಯುಬಿ ವೆಂಕಟೇಶ, ಸರ್ವರಿಗೂ ಸಜ್ಜನರಿಗೂ ಒಳ್ಳೆಯದನ್ನು ಕೊಡಬೇಕು, ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವಂತೆ ಸಿಎಂ, ಡಿಸಿಎಂ ಕಾರ್ಯಕ್ರಮ ಕೊಟ್ಟಿದ್ದಾರೆ. ಆದರೆ, ಕೆಳಮನೆಯಲ್ಲಿ ಬಜೆಟ್ ಮಂಡನೆಯಾಗಿದೆಯಷ್ಟೆ. ಅಷ್ಟರಲ್ಲೇ ಪ್ರತಿಭಟನೆ ನಡೆಸಿ ಬಜೆಟ್ನಲ್ಲಿ ಏನಿಲ್ಲ ಎನ್ನುತ್ತಾರೆ. ಇವರ ಮನೆಗೆ ಬಜೆಟ್ ಕಾಪಿ ಏನಾದರೂ ಹೋಗಿತ್ತಾ? ಎಂದು ಬಿಜೆಪಿ ಸದಸ್ಯರ ಕಾಲೆಳೆದು ಸಿದ್ದರಾಮಯ್ಯ ಬಜೆಟ್ ಅನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಒಂದು ವರ್ಷಕ್ಕೆ ಪೊಲೀಸರ ವರ್ಗಾವಣೆ ತಡೆಗೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ ಅಂಗೀಕಾರ