ಉಡುಪಿ: ಇಲ್ಲಿನ ಡಿಪ್ಲೋಮಾ ಪದವೀಧರರೊಬ್ಬರು ಸ್ಟೀಲ್ ನಟ್ಸ್ ಮೂಲಕ ದೇವರ ವಿಗ್ರಹ ರಚಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರ, ಕಲಾವಿದ ಅಮಿತ್ ಅಂಚನ್ ಅವರು ವಾಹನಗಳಲ್ಲಿ ಬಳಸುವ ಮೈಲ್ಡ್ ಸ್ಟೀಲ್ ನಟ್‌ಗಳಿಂದ ಸುಂದರವಾದ ಆದಿಯೋಗಿ ವಿಗ್ರಹ ತಯಾರಿಸಿದ್ದಾರೆ.
ರೈತ ಕುಟುಂಬದಿಂದ ಬಂದಿರುವ ಅಮಿತ್ ಅಂಚನ್ ಅವರ ತಂದೆ ಲಕ್ಷ್ಮಣ್ ಅಂಚನ್, ಅಜ್ಜ ಚಿನ್ನ ಆರ್ ಅಂಚನ್ ಕೂಡ ಕಲಾವಿದರಾಗಿದ್ದರು. ಈಗಾಗಲೇ ಹಲವು ರೀತಿಯ ಕಲಾಕೃತಿಗಳು, ಟ್ಯಾಬ್ಲೋಗಳನ್ನು ತಯಾರಿಸಿರುವ ಅಮಿತ್, ವಿಭಿನ್ನವಾಗಿ ಏನಾದರೂ ಮಾಡಬೇಕೆಂಬ ಕನಸು ಕಂಡಿದ್ದರು. ಅಮಿತ್ ಪಾಲಿಟೆಕ್ನಿಕ್ನಲ್ಲಿ ಮೆಕಾನಿಕ್ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ಮೊದಲು ಮಣ್ಣಿನಿಂದ ಆದಿಯೋಗಿ ಕಲಾಕೃತಿ ರಚಿಸಿ, ಅದಕ್ಕೆ ನಟ್ಗಳನ್ನು ಜೋಡಿಸಿದ್ದಾರೆ.
"ಸುಮಾರು ಮೂರು ತಿಂಗಳ ಪರಿಶ್ರಮದಿಂದ ಈ ಕಲಾಕೃತಿ ಮೂಡಿದೆ. ಸುಮಾರು 58 ಕೆ.ಜಿ. ತೂಕವಿರುವ ಈ ಕಲಾಕೃತಿಯ ರಚನೆಗೆ 7,600 ಮೈಲ್ಡ್ ಸ್ಟೀಲ್ ನಟ್ಗಳನ್ನು ಬಳಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮೆಚ್ಚುಗೆ: "ಶಿವರಾತ್ರಿಯ ದಿನ ಕಟಪಾಡಿಯ ವಿಶ್ವನಾಥ ದೇವಸ್ಥಾನದಲ್ಲಿ ಆದಿಯೋಗಿ ವಿಗ್ರಹದ ಪ್ರದರ್ಶನ ನಡೆಸಲಾಗಿತ್ತು. ಜನ ಮೆಚ್ಚುಗೆ ಪಡೆದ ನಂತರ ಅವರ ಸಲಹೆಯ ಮೇರೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಎರಡು ತಿಂಗಳ ಬಳಿಕ ಪ್ರಶಸ್ತಿ ಪತ್ರ ಬಂದಿರುವುದು ಊರಿಗೆ ಮಾತ್ರವಲ್ಲ ಜಿಲ್ಲೆಗೂ ಹೆಮ್ಮೆಯ ವಿಷಯವಾಗಿದೆ" ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದರು.