ಸುಳ್ಯ: ಗೋಬಿ ಮಂಚೂರಿ ನಿಷೇಧದ ಬಗ್ಗೆ ಪರೀಕ್ಷೆ ನಡೆಸುವಂತೆ ಹೇಳಲಾಗಿತ್ತು. ಅದರಂತೆ ಪರೀಕ್ಷೆ ನಡೆಸಲಾಗಿದ್ದು, ವರದಿ ಪರಿಶೀಲಿಸಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸೋಮವಾರ ತಿಳಿಸುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ನಿಷೇಧ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗಾಗಲೇ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ನಿಷೇಧ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇಲ್ಲ. ವರದಿ ನೋಡಿಕೊಂಡು ಏನು ಮಾಡಬೇಕೆಂದು ತಿಳಿಸುತ್ತೇವೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತ ಪ್ರಶ್ನೆಗೆ, ಆಸ್ಪತ್ರೆ ಬೇಡಿಕೆ ಏನಾಗಿದೆ ಎಂಬುದನ್ನು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸೋತ ಅಭ್ಯರ್ಥಿಯ ಗಲಾಟೆ: ಸುಳ್ಯದಲ್ಲಿ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಸಮಾವೇಶಕ್ಕೆ ತನಗೆ ಆಹ್ವಾನ ನೀಡಿಲ್ಲ ಎಂದು ಸುಳ್ಯ ಕ್ರೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ, ಎಐಸಿಸಿ ಅಧ್ಯಕ್ಷ ಖರ್ಗೆ ಆಪ್ತರೂ ಆದ ಜಿ.ಕೃಷ್ಣಪ್ಪ ತಗಾದೆ ತೆಗೆದು ವೇದಿಕೆಯೇರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಏರು ಧ್ವನಿಯಲ್ಲಿ ಪ್ರಶ್ನಿಸಿದ ಪ್ರಸಂಗ ನಡೆಯಿತು.
ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿಗಳು ಸಹಿತ ಪ್ರಮುಖರು ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೇದಿಕೆಗೆ ಏರಿ ಬಂದ ಜಿ.ಕೃಷ್ಣಪ್ಪ ಸಚಿವರು ಮತ್ತು ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಅವರ ಬಳಿ ತೆರಳಿ ಏರು ಧ್ವನಿಯಲ್ಲಿ ಅವರನ್ನು ಆಹ್ವಾನಿಸದ ಕುರಿತು ಅಸಮಾಧಾನ ಹೊರಹಾಕಿದರು. ಬಳಿಕ ಕಾಂಗ್ರೆಸ್ ಮುಖಂಡರು ವೇದಿಕೆಗೆ ಆಗಮಿಸಿ ಅವರನ್ನು ಕರೆದೊಯ್ದ ಸಮಾಧಾನಪಡಿಸಿದರು.
ಇದನ್ನೂ ಓದಿ: ಬೆಂಗಳೂರಿನ ಕೆರೆಗಳಿಗೆ ಸಂಸ್ಕರಿಸಿದ ನೀರು: ಅಂತರ್ಜಲ ಮಟ್ಟ ಹೆಚ್ಚಿಸಲು BWSSB ಯೋಜನೆ