ಬೆಂಗಳೂರು: ವಿವಿಧ ಕ್ಷೇತ್ರಗಳ ಗಣ್ಯರು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು.
ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್, ನಟ ಶಿವ ರಾಜ್‌ಕುಮಾರ್, ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಿರ್ಮಾಪಕ ಚಿನ್ನೇಗೌಡ, ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.
ನನ್ನ ರಾಜಕೀಯ ಜೀವನದ ಮಾರ್ಗದರ್ಶಕರು- ಸುಮಲತಾ: "ಎಸ್.ಎಂ.ಕೃಷ್ಣ ಅವರ ಆಶೀರ್ವಾದ ಪಡೆದು, ಅವರ ಮಾರ್ಗದರ್ಶನದ ಮೂಲಕವೇ ನಾನು ರಾಜಕೀಯ ಜೀವನ ಆರಂಭಿಸಿದ್ದೆ. ಅವರು ನಮ್ಮ ರಾಜ್ಯ ಕಂಡ ಅತ್ಯಂತ ಶ್ರೇಷ್ಠ ಹಾಗೂ ಧೀಮಂತ ರಾಜಕಾರಣಿ" ಎಂದು ಸುಮಲತಾ ಅಂಬರೀಶ್ ಬಣ್ಣಿಸಿದರು.
ಸಂಗೀತದ ಬಗ್ಗೆ ಅವರಿಗೆ ಅಪಾರ ಒಲವಿತ್ತು-ಶಿವ ರಾಜ್‌ಕುಮಾರ್: "ಎಸ್.ಎಂ.ಕೃಷ್ಣ ಅವರು ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಆತ್ಮೀಯರು. ಸಂಗೀತ ಕ್ಷೇತ್ರದ ಬಗ್ಗೆ ಅಪಾರ ಒಲವಿಟ್ಟುಕೊಂಡಿದ್ದವರು. ಅವರ ಅಗಲಿಕೆ ನೋವು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಟ ಶಿವ ರಾಜ್‌ಕುಮಾರ್ ತಿಳಿಸಿದರು.
ಎರಡೇ ದಿನದಲ್ಲಿ ಅಡುಗೆ ಮನೆಗೆ ಜಾಗದ ವ್ಯವಸ್ಥೆ ಮಾಡಿಕೊಟ್ಟಿದ್ದರು- ತೇಜಸ್ವಿನಿ ಅನಂತ್ ಕುಮಾರ್: "ಒಬ್ಬ ಸ್ನೇಹಜೀವಿ ಹಾಗೂ ಹಿರಿಯ ರಾಜಕಾರಣಿಯನ್ನು ರಾಜ್ಯ ಕಳೆದುಕೊಂಡಿದೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಬಹಳ ನಷ್ಟವಾಗಿದೆ. ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನಾವು ಅದಮ್ಯ ಚೇತನಕ್ಕಾಗಿ ಅಡುಗೆ ಮನೆಗೆ ಜಾಗ ಹುಡುಕುತ್ತಿದ್ದಾಗ ಕೇವಲ ಎರಡೇ ದಿನದಲ್ಲಿ ಜಾಗದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅನಂತ್ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದಾಗ ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದರು. ಇಬ್ಬರೂ ಸೇರಿ ಬೆಂಗಳೂರಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ '' ಎಂದು ದಿ.ಅನಂತ್ ಕುಮಾರ್ ಅವರ ಪತ್ನಿ ಹಾಗೂ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.
ಸೊಗಸುಗಾರ ರಾಜಕಾರಣಿ- ವಾಟಾಳ್: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, "ಎಸ್.ಎಂ ಕೃಷ್ಣ ಅವರು ಸೊಗಸುಗಾರ ರಾಜಕಾರಣಿ. ನನಗೂ ಅವರಿಗೆ ಸುಮಾರು ವರ್ಷದ ಬಾಂಧವ್ಯವಿತ್ತು. ಜಾತಿಯ ಸೋಂಕಿಲ್ಲದೆ ಪ್ರೀತಿ ವಿಶ್ವಾಸದ್ದಲ್ಲಿದ್ದವರು. ಅವರು ಬಹಳ ಗೌರವಯುತವಾಗಿ ಆದರ್ಶ ರಾಜಕಾರಣ ಮಾಡಿದವರು. ಇವತ್ತು ಆದರ್ಶ ರಾಜಕಾರಣ ಉಳಿದಿಲ್ಲ. ಅವರ ನಿಧನ ತುಂಬಲಾರದ ನಷ್ಟ" ಎಂದು ಹೇಳಿದರು.
ನಿರ್ಮಾಪಕ ಚಿನ್ನೇಗೌಡ ಮಾತನಾಡಿ, "ಸೌಮ್ಯ ಸ್ವಭಾವದ ಕೃಷ್ಣ ಅವರು ಸದಾ ಅಜರಾಮರ. ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶೋಕದಲ್ಲಿತ್ತು. ಆ ಸಂದರ್ಭದಲ್ಲಿ ಎಸ್.ಎಂ ಕೃಷ್ಣ ಅವರು ತೆಗೆದುಕೊಂಡ ನಿರ್ಧಾರಗಳನ್ನು ಮರೆಯಲು ಸಾಧ್ಯವಿಲ್ಲ" ಎಂದು ನೆನೆದರು.
ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಅವರ ಪಾತ್ರ ಹಿರಿದು- ಅರವಿಂದ್ ಲಿಂಬಾವಳಿ:''ಎಸ್.ಎಂ.ಕೃಷ್ಣ ಅವರು ಕೊನೆಯ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವದಿಂದ ಅಸಮಾಧಾನಗೊಂಡು, ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿಗೆ ಸೇರಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಅವರ ಪಾತ್ರ ಹೆಚ್ಚಿತ್ತು. ನಮಗೆ ಅವರು ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೆ" ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಪ್ರಾರ್ಥಿಸಿದರು.
ಇದನ್ನೂ ಓದಿ: ಎಸ್.ಎಂ.ಕೃಷ್ಣ ನಿಧನ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ, ನಾಳೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ