ಹುಬ್ಬಳ್ಳಿ: ಹಿಂದೊಂದು ಕಾಲವಿತ್ತು. ಮಹಿಳೆಯರು ಹೊಸ್ತಿಲು ದಾಟಲು ಅವಕಾಶವಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರೇ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ತಾವು ಕೂಡ ಸಮರ್ಥರು ಅನ್ನೋದನ್ನು ರುಜುವಾತು ಮಾಡಿದ್ದು, ಇದಕ್ಕೆ ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಮಹಿಳಾ ಅಧಿಕಾರಿಗಳು ಸ್ಪಷ್ಟ ನಿದರ್ಶನವಾಗಿದ್ದಾರೆ.
ವಾಣಿಜ್ಯ ನಗರಿ ಹಾಗೂ ವಿದ್ಯಾಕಾಶಿ ಎಂದು ಖ್ಯಾತಿಗಳಿಸಿರುವ ಅವಳಿ ನಗರದ ಧಾರವಾಡ ಜಿಲ್ಲೆಯಲ್ಲಿ ಸದ್ಯ ಆಡಳಿತ ಚುಕ್ಕಾಣಿ ಬಹುತೇಕ ಮಹಿಳಾ ಅಧಿಕಾರಿಗಳ ಕೈಯಲ್ಲೇ ಇದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಪ್ರಥಮ ಪ್ರಜೆ, ಪೊಲೀಸ್ ಆಯುಕ್ತರಿಂದ ಹಿಡಿದು, ಇಡೀ ಜಿಲ್ಲೆಯ ಆಡಳಿತ ನಡೆಸುವ ಜಿಲ್ಲಾಧಿಕಾರಿ ಸಹಿತ ಮಹಿಳೆಯೇ ಇರುವುದು ವಿಶೇಷವಾಗಿದೆ.
ಮಹಿಳಾ ಅಧಿಕಾರಿಗಳ ಕೈಯುಲ್ಲಿ ಧಾರವಾಡ ಆಡಳಿತ: ಧಾರವಾಡ ಜಿಲ್ಲಾ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಜಿಲ್ಲಾಮಟ್ಟದ ಅಧಿಕಾರಿ ಸ್ಥಾನಗಳಲ್ಲಿ ಮಹಿಳೆಯರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜೆ.ಆರ್.ಜಿ., ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಡಿಸಿ ನಂತರದಲ್ಲಿ ಬರುವ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಹು-ಧಾ ಮಹಾನಗರ ಪಾಲಿಕೆಯ ಮೇಯರ್ ವೀಣಾ ಭರದ್ವಾಡ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರಾಗಿ ಜಯಶ್ರೀ ಶಿಂತ್ರಿ, ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ.ಶಶಿ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ, ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ... ಹೀಗೆ ಜಿಲ್ಲೆಯ ಬಹುತೇಕ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳೇ ಇದ್ದಾರೆ. ಇದು ಜಿಲ್ಲೆಯ ಮಹಿಳೆಯರು ಹೆಮ್ಮೆ ಪಡುವಂತಹ ಸಂಗತಿಯಾಗಿದೆ.
ಆಡಳಿತ, ಶಿಕ್ಷಣದಲ್ಲಿ ಅಷ್ಟೇ ಅಲ್ಲ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹುದ್ದೆಯಲ್ಲಿಯೂ ಕೆ ಜಿ ಶಾಂತಿ ಎಂಬುವರು ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಸಿಹೆಚ್ಓ ಡಾ.ಸುಜಾತಾ ಹಸವಿಮಠ ಕೆಲಸ ಮಾಡುತ್ತಿದ್ದರೆ, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನಾಗವೇಣಿ ಎಸ್ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆಯ ಡಿಎಫ್ಓ ಆಗಿ ವೃಷ್ಣಿ ಎನ್ನುವ ಮಹಿಳಾ ಅಧಿಕಾರಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಐಪಿಎಸ್ ಆಧಿಕಾರಿಗಳ ಸ್ಫೂರ್ತಿದಾಯಕ ಕಥೆ; ಕನಸನ್ನು ನನಸಾಗಿಸಿಕೊಂಡು ಗುರಿ ಮುಟ್ಟಿದ ಮಹಿಳಾ ಸಾಧಕಿಯರು
ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ ಸಹಿತ, ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಮಹಿಳೆಯರ, ದುರ್ಬಲ ವರ್ಗದವರ ಏಳಿಗೆಯೊಂದಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ, ನೌಕರರ, ಸಾರ್ವಜನಿಕರ ಸಹಕಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಪ್ರಮುಖ ಎಲ್ಲ ಹುದ್ದೆಗಳಲ್ಲಿಯೂ ಮಹಿಳೆಯರೇ ಇರುವುದು ವಿಶೇಷ.
ಇದನ್ನೂ ಓದಿ: ಭಾರತೀಯ ಕೃಷಿಯಲ್ಲಿ ಮಹಿಳಾ ಡ್ರೋನ್ ಪೈಲಟ್ಗಳ ಕ್ರಾಂತಿ